ಕನ್ನಡಪ್ರಭ ವಾರ್ತೆ ಮಂಗಳೂರು
ಸೋಮವಾರ ಬೆಳಗ್ಗೆ 3.10ರ ವೇಳೆಗೆ ಮನೆಯಿಂದ ಹೊರಟಿದ್ದ ಮುಮ್ತಾಜ್ ಅಲಿ ಸುಮಾರು 4.30ರ ವೇಳೆಗೆ ಕೂಳೂರು ಸೇತುವೆ ಬಳಿ ಬಿಎಂಡಬ್ಲ್ಯೂ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ, ಸ್ಥಳೀಯ ಯುವಕರು ಸೇರಿ ಒಟ್ಟು ಆರು ತಂಡಗಳು ರಾತ್ರಿವರೆಗೆ ಶೋಧ ಕಾರ್ಯ ನಡೆಸಿದರೂ ದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಮತ್ತೆ ಶೋಧ ಆರಂಭವಾಯಿತು. ಸುಮಾರು 10.30ರ ವೇಳೆಗೆ ಮುಮ್ತಾಜ್ ಅವರ ಮೃತದೇಹ ಕೂಳೂರು ಸೇತುವೆಯ ಕೆಲವೇ ಮೀಟರ್ ದೂರದಲ್ಲಿ ಪತ್ತೆಯಾಯಿತು.
ಬಳಿಕ ಮೃತದೇಹವನ್ನು ಎಜೆ ಆಸ್ಪತ್ರೆಗೆ ಕೊಂಡೊಯ್ದು, ಪೋಸ್ಟ್ ಮಾರ್ಟಂ ಮತ್ತಿತರ ಪ್ರಕ್ರಿಯೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕೃಷ್ಣಾಪುರದ ಅವರ ಮನೆಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದ್ದು, ನೂರಾರು ಮಂದಿ ಭಾಗವಹಿಸಿದ್ದರು. ಸಂಜೆ ವೇಳೆಗೆ ಕೃಷ್ಣಾಪುರ ಈದ್ಗಾ ಮಸೀದಿಯಲ್ಲಿ ಸರ್ವ ಮುಖಂಡರು, ಸಾರ್ವಜನಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಮಹಿಳೆ ಸೇರಿದಂತೆ ಆರು ಮಂದಿಯ ತಂಡದ ನಿರಂತರ ಬ್ಲ್ಯಾಕ್‌ಮೇಲ್, ಬೆದರಿಕೆ ಮತ್ತು ಕಿರುಕುಳದ ಪರಿಣಾಮವೇ ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆರು ಮಂದಿ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಸುಲಿಗೆ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಿಸಲಾಗಿದೆ.
ಸುರತ್ಕಲ್ ಕೃಷ್ಣಾಪುರದ 7ನೇ ಬ್ಲಾಕ್ ನಿವಾಸಿ ಆಯಿಷಾ ರೆಹಮತ್ ಎಂಬಾಕೆಯೇ ಪ್ರಕರಣದ ಮಾಸ್ಟರ್ ಮೈಂಡ್. ಮುಮ್ತಾಜ್ ಅಲಿಗೆ ನಿರಂತರ ಬೆದರಿಕೆ, ಹಣದ ಬೇಡಿಕೆ ಇಟ್ಟಿದ್ದ ಈಕೆಯ ಪತಿ ಶೋಯೆಬ್ ಕೂಡ ಸಾಥ್ ನೀಡಿದ್ದ. ಜತೆಗೆ ಕಾಟಿಪಳ್ಳ ಬೊಳ್ಳಾಜೆಯ ಅಬ್ದುಲ್ ಸತ್ತಾರ್, ಬಂಟ್ವಾಳ ಸಜಿಪಮುನ್ನೂರು ನಿವಾಸಿ ಖಲಂದರ್ ಶಾಫಿ, ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಮುಸ್ತಫಾ, ಇದೇ ಊರಿನ ಮೊಹಮ್ಮದ್ ಸಿರಾಜ್ ಸಲಾಂ ಎಂಬವರ ಮೇಲೂ ಪ್ರಕರಣ ದಾಖಲಾಗಿದೆ. ಇವರ ಪತ್ತೆಗೆ ಪೊಲೀಸ್ ತಂಡಗಳು ಕಾರ್ಯಾಚರಣೆ ಆರಂಭಿಸಿವೆ.
...................
ವಿದ್ಯಾಸಂಸ್ಥೆ ಮಾತ್ರವಲ್ಲದೆ ವಿವಿಧ ಉದ್ಯಮಗಳನ್ನು ಹೊಂದಿದ್ದ ಮುಮ್ತಾಜ್ ಅಲಿ ಸಾಮಾಜಿಕ, ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದರು. ಪ್ರಥಮ ಆರೋಪಿ ಆಯಿಷಾ ರೆಹಮತ್, ಇತರರ ಜತೆ ಸೇರಿ ವ್ಯವಸ್ಥಿತವಾಗಿ ಹನಿಟ್ರಾಪ್ ನಡೆಸಿದ್ದೇ ಮುಮ್ತಾಜ್ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರವೂ ಹೆಚ್ಚಿನ ಹಣಕ್ಕೆ ರೆಹಮತ್ ಬೇಡಿಕೆ ಇಟ್ಟಾಗ ಮುಮ್ತಾಜ್ ನಿರಾಕರಿಸಿದ್ದಾರೆ. ಈ ವೇಳೆ ಮುಮ್ತಾಜ್ ಅವರ ರಾಜಕೀಯ ವಿರೋಧಿ ಅಬ್ದುಲ್ ಸತ್ತಾರ್‌ನ್ನು ಸಂಪರ್ಕಿಸಿ ಎಲ್ಲ ವಿಚಾರ ತಿಳಿಸಿದ್ದಾಳೆ. ಈ ಕಾಲ್ ರೆಕಾರ್ಡ್‌ನ ಆಡಿಯೊ ಇಟ್ಟುಕೊಂಡು ಸತ್ತಾರ್ ಮತ್ತು ಉಳಿದ ಮೂವರು ಮುಮ್ತಾಜ್ ಅಲಿಗೆ 2 ಕೋಟಿ ರು. ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ನಡುವೆ ಆಯಿಷಾ ರೆಹಮತ್, ಮುಮ್ತಾಜ್ ಅವರ ಪತ್ನಿಯನ್ನು ಭೇಟಿಯಾಗಿದ್ದು, ಇದರ ಬಳಿಕ ಮುಮ್ತಾಜ್ ಕುಟುಂಬದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ಈ ಎಲ್ಲ ವಿಚಾರಗಳಿಂದ ತನ್ನ ಮರ್ಯಾದೆಗೆ ಧಕ್ಕೆ ಉಂಟಾಯಿತೆಂದು ತೀವ್ರ ಮಾನಸಿಕ ಗೊಂದಲಕ್ಕೀಡಾದ ಮುಮ್ತಾಜ್ ದಾರಿ ಕಾಣದೆ ಆತ್ಮಹತ್ಯೆ ತೀರ್ಮಾನ ಕೈಗೊಂಡರು ಎಂದು ತಿಳಿದುಬಂದಿದೆ...................ಬಸ್ಸಿಗೆ ಡಿಕ್ಕಿಯಾಗಿದ್ದ ಕಾರುಸೋಮವಾರ ಮುಂಜಾನೆ 3.10ರ ಸುಮಾರಿಗೆ ಮನೆಯಿಂದ ಹೊರಟಿದ್ದ ಮುಮ್ತಾಜ್ ಅವರ ಬಿಎಂಡಬ್ಲ್ಯೂ ಕಾರು ಕೂಳೂರಿನ ಎಂಸಿಎಂ ಬಳಿಯ ರೈಲ್ವೆ ಗೇಟ್ ಬಳಿ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಅಪಘಾತಕ್ಕೆ ಒಳಗಾದ ಬಸ್ಸನ್ನು ಗುರುತಿಸಲಾಗಿದ್ದು, ಬಸ್ಸು ಮಾಲೀಕರು ಈ ಕುರಿತು ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ.....................
ಮುಮ್ತಾಜ್ ಅಲಿ ಅಕಾಲಿಕ ಸಾವಿನಿಂದ ಅವರ ಕುಟುಂಬ ಕಂಗಾಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಬ್ಲಾಕ್ ಮೇಲ್‌ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಇದನ್ನು ಸಹಿಸದೆ ಕೆಲವು ಶಕ್ತಿಗಳು ಕುತಂತ್ರ ಮಾಡಿ ಸಾವಿಗೆ ಕಾರಣರಾಗಿದ್ದಾರೆ. ಆತನ ಫೋನ್‌ನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಸಹೋದರನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.