ಕನ್ನಡಪ್ರಭ ವಾರ್ತೆ ತುರುವೇಕೆರೆ
ಜೆಡಿಎಸ್ ನ ಮುಖಂಡರು ಮತ್ತು ಕಾರ್ಯಕರ್ತರು ದಬ್ಬೇಘಟ್ಟ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯ ಮುಂದೆ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಜಮಾಯಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ್ ರವರ ನೇತೃತ್ವದಲ್ಲಿ ಜಮಾವಣೆಗೊಂಡಿದ್ದರು. ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೇಮಾವತಿ ನಾಲಾ ಕಚೇರಿಯತ್ತ ತೆರಳಿ ಕಚೇರಿ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಎಲ್ಲಾ ಕೆರೆ ಕಟ್ಟೆಗಳು ಒಣಗಿವೆ. ಹೇಮಾವತಿ ಡ್ಯಾಂ ನಲ್ಲಿ ಸಾಕಷ್ಟು ನೀರಿದೆ. ಹಾಗಾಗಿ ಕೂಡಲೇ ಹೇಮಾವತಿ ನದಿ ನೀರನ್ನು ಎಲ್ಲಾ ಕಾಲುವೆಗಳ ಮೂಲಕ ಹರಿಯಬಿಡಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಹೇಮಾವತಿ ನೀರನ್ನು ಕೂಡಲೇ ಬಿಡುಗಡೆಗೊಳಿಸದಿದಲ್ಲಿ ಗೊರೂರು ಡ್ಯಾಂ ತನಕ ಪಾದಯಾತ್ರೆ ಮಾಡಲು ಎನ್ ಡಿ ಎ ಕಾರ್ಯಕರ್ತರು ಸಿದ್ದವಿದ್ದಾರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ಸತತವಾಗಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲೆಯ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಿಸಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಯೋಜನೆಯನ್ನು ರದ್ದುಪಡಿಬೇಕೆಂದು ಆಗ್ರಹಿಸಿದರು.ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಗುಬ್ಬಿಯ ಬಿಜೆಪಿ ಮುಖಂಡ ದಿಲೀಪ್ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಹೇಮಾವತಿ ನದಿ ನೀರನ್ನು ಕಾಲುವೆಗಳ ಮೂಲಕ ಹರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಮಾಡುವುದಾಗಿ ತಿಳಿಸಿದರು.
ಈ ವೇಳೆ ತಾಲೂಕು ಜೆ ಡಿ ಎಸ್ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಡೊಂಕಿಹಳ್ಳಿ ಪ್ರಕಾಶ್, ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.