ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ!

KannadaprabhaNewsNetwork |  
Published : Oct 09, 2026, 02:30 AM IST
ತಬಕದಹೊನ್ನಳ್ಳಿ ಅಶೋಕ | Kannada Prabha

ಸಾರಾಂಶ

ಮರಣ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರಿನ ಬದಲು ಮಗನ ಹೆಸರು ನಮೂದಿಸಿ ಸಾಯಿಸಿರುವ ನಾಡಕಚೇರಿ, 5 ವರ್ಷವಾದರೂ ತನ್ನ ತಪ್ಪನ್ನು ಸರಿ ಮಾಡುತ್ತಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮರಣ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರಿನ ಬದಲು ಮಗನ ಹೆಸರು ನಮೂದಿಸಿ ಸಾಯಿಸಿರುವ ನಾಡಕಚೇರಿ, 5 ವರ್ಷವಾದರೂ ತನ್ನ ತಪ್ಪನ್ನು ಸರಿ ಮಾಡುತ್ತಿಲ್ಲ. ಇದರಿಂದಾಗಿ ತಾನು ಜೀವಂತವಾಗಿದ್ದೇನೆ ನೋಡಿ ಎಂದು ಪ್ರತ್ಯಕ್ಷ ಹೋಗಿ ನಿಂತರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಪರದಾಡುವ ಪರಿಸ್ಥಿತಿ ಈ ವ್ಯಕ್ತಿಯದ್ದು.

ಇದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಅಶೋಕ ಪರಸಪ್ಪ ಗಾವಡೇಕರ್‌ (34) ಎಂಬಾತನ ಗೋಳು.

ಆಗಿರುವುದೇನು?

ಅಶೋಕ ಅವರ ತಂದೆ ಪರಸಪ್ಪ ಅವರು 2022ರಲ್ಲಿ ಮೃತಪಟ್ಟಿದ್ದರಿಂದ ಅವರ ಮರಣ ಪ್ರಮಾಣ ಪತ್ರಕ್ಕಾಗಿ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಮೃತಪಟ್ಟವರ ಹೆಸರಲ್ಲಿ ಪರಸಪ್ಪ ಬದಲಿಗೆ ಅಶೋಕ ಎಂದು ನಮೂದಾಗಿದೆ. ಆಗಲೇ ಈ ತಪ್ಪು ಸರಿಪಡಿಸುವಂತೆ ತಿಳಿಸಿದ್ದಾರೆ. ಸಿಬ್ಬಂದಿ ಅದನ್ನು ಪೆನ್ನಿನಿಂದ ತಿಂದಿದ್ದಾರೆ ಹೊರತು ಕಂಪ್ಯೂಟರ್‌ನಲ್ಲಿ ಆದ ತಪ್ಪನ್ನು ಸರಿಪಡಿಸಿ ಮತ್ತೊಂದು ಪ್ರಮಾಣ ಪತ್ರ ನೀಡಿಲ್ಲ.

ಮರಣ ಪ್ರಮಾಣಪತ್ರದಲ್ಲಿ ಪೆನ್ನಿನಲ್ಲಿ ತಿದ್ದಿಕೊಟ್ಟಿರುವುದರಿಂದ ಸಿಸ್ಟಂನಲ್ಲೂ ಸರಿಮಾಡಿರಬೇಕು ಎಂದು ಭಾವಿಸಿರುವ ಅಶೋಕ, ವರ್ಷ ಬಳಿಕ ಟ್ರ್ಯಾಕ್ಟರ್‌ ಖರೀದಿಸಲು ಅರ್ಜಿ ಸಲ್ಲಿಸಿದ್ದಾರೆ. ಆಗ ತಮ್ಮ ತಂದೆಯ ಮರಣ ಪ್ರಮಾಣ ಪತ್ರ ತಿದ್ದುಪಡಿ ಆಗದಿರುವುದು ಗಮನಕ್ಕೆ ಬಂದಿದೆ. ಅಲ್ಲಿಂದ ಮತ್ತೆ ಕಚೇರಿಗೆ ತೆರಳಿದರೆ ಇಂದು ಬಾ, ನಾಳೆ ಬಾ ಎಂದು ಸಾಗಹಾಕಿದ್ದಾರೆ. ಅಲ್ಲಿಂದ ತಹಸೀಲ್ದಾರ್‌, ಜಿಲ್ಲಾಧಿಕಾರಿ ಕಚೇರಿಗಳಿಗೂ 50ಕ್ಕೂ ಹೆಚ್ಚು ಬಾರಿ ತಮ್ಮ ಸಮಸ್ಯೆ ಹೊತ್ತು ಹೋದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಎಲ್ಲರೂ ಬರೀ ಮಾಡಿಕೊಡುತ್ತೇವೆ ಎಂದಷ್ಟೇ ಹೇಳುತ್ತಾರೆಯೇ ಹೊರತು ನಾನು ಜೀವಂತ ಇದ್ದೇನೆ ಎಂಬ ದಾಖಲೆ ನೀಡುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬನಿಗೆ 5 ವರ್ಷ, ಇನ್ನೊಬ್ಬನಿಗೆ 3 ವರ್ಷ. ಇದೀಗ ಶಾಲೆಗೆ ದಾಖಲಿಸಬೇಕಿದೆ. ಆದರೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಆಗುತ್ತಿಲ್ಲ. ನೀವು ಜೀವಂತ ಇರುವ ಬಗ್ಗೆ ದಾಖಲೆ ಕೊಟ್ಟರೆ ಆದಾಯ, ಜಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಅಲ್ಲಿನ ಸಿಬ್ಬಂದಿ ಹೇಳಿ ಕಳುಹಿಸುತ್ತಾರಂತೆ. ಇದರಿಂದ ಮಕ್ಕಳನ್ನು ಶಾಲೆಗೆ ದಾಖಲಿಸಲು ಸಮಸ್ಯೆಯಾಗಿದೆ.

ತಾವೇ ಮಾಡಿರುವ ತಪ್ಪನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆ ಮುಂದಾಗಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ, ತಹಸೀಲ್ದಾರ್‌ರು ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಇದೀಗ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೀಡುತ್ತಿದ್ದಾರೆ. ಅಧಿಕಾರಿ ವರ್ಗ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.ತಂದೆಯ ಮರಣ ಪ್ರಮಾಣ ಪತ್ರ ನೀಡಿ ಎಂದು ಅರ್ಜಿ ಸಲ್ಲಿಸಿದರೆ ನನ್ನದೇ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಜೀವಂತವಾಗಿದ್ದೇನೆ ನೋಡಿ ಎಂದು ಪ್ರತ್ಯಕ್ಷವಾಗಿ ಹೋಗಿ ನಿಂತರೂ ಸರಿ ಮಾಡಿಕೊಡುತ್ತಿಲ್ಲ. ತಹಸೀಲ್ದಾರ್‌, ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಪ್ರಯೋಜನವಾಗುತ್ತಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಆಗದೆ ಮಕ್ಕಳನ್ನು ಶಾಲೆಗೆ ದಾಖಲಿಸಲು ಆಗುತ್ತಿಲ್ಲ.

ಅಶೋಕ ಪರಸಪ್ಪ ಗಾವಡೇಕರ್‌, ದಾಖಲೆಗಳಲ್ಲಿ ಮೃತಪಟ್ಟ ವ್ಯಕ್ತಿಅಶೋಕ ಗಾವಡೇಕರ್‌ ವಿಚಾರದಲ್ಲಿ ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ತಾವೂ ಮನವಿ ಮಾಡಿದ್ದೇವೆ. ಆದರೂ ಸರಿ ಮಾಡುತ್ತಿಲ್ಲ. ತಹಸೀಲ್ದಾರ್‌, ಜಿಲ್ಲಾಧಿಕಾರಿಗಳು ಕೂಡ ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ಸರಿಪಡಿಸಿಕೊಡದಿದ್ದರೆ ನಾವೇ ಸಾರ್ವಜನಿಕರನ್ನು ಸೇರಿಸಿಕೊಂಡು ಹೋರಾಟ ಮಾಡುತ್ತೇವೆ.

ಚಂದ್ರಶೇಖರ ಕರಡಿಕೊಪ್ಪ, ಮುಖಂಡರು, ಅಹಿಂದ ಸಂಘಟನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಗೆ ಪರಿಗಣಿಸಿ
ಗಾಂಧಿ ತತ್ವ ಅನುಷ್ಠಾನವೇ ನಿಜವಾದ ಗೌರವ