15 ದಿನಗಳಲ್ಲಿ ನಾಲ್ವರ ಸಾವು: ಮಲಮಿಶ್ರಿತ ನೀರು ಸೇವನೆ ಕಾರಣ?

KannadaprabhaNewsNetwork | Published : May 27, 2024 1:02 AM

ಸಾರಾಂಶ

ಇಲ್ಲಿಗೆ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ 15 ದಿನಗಳ ಅಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಾಲ್ವರು ಮೃತಪಟ್ಟಿದ್ದು, ಕಲುಷಿತ ನೀರು ಸೇವನೆಯೇ ಈ ಸಾವಿಗೆ ಕಾರಣ ಎಂಬ ಆರೋಪ ಇದೀಗ ಕೇಳಿಬಂದಿದೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿಇಲ್ಲಿಗೆ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ 15 ದಿನಗಳ ಅಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಾಲ್ವರು ಮೃತಪಟ್ಟಿದ್ದು, ಕಲುಷಿತ ನೀರು ಸೇವನೆಯೇ ಈ ಸಾವಿಗೆ ಕಾರಣ ಎಂಬ ಆರೋಪ ಇದೀಗ ಕೇಳಿಬಂದಿದೆ. ಮಾರ್ಚ್ ತಿಂಗಳಲ್ಲಿ ಈ ಸಾವುಗಳು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆದರೆ ಈ ಸಾವುಗಳಿಗೆ ‘ಲೋ ಬೀಪಿ ಹಾಗೂ ಥೈರಾಯ್ಡ್‌’ ನಂಥ ಸಮಸ್ಯೆಗಳು ಕಾರಣ ಎಂದು ಕೆಲ ಅಧಿಕಾರಿಗಳು ಷರಾ ಬರೆದಿದ್ದು, ಈ ಮೂಲಕ ಕಲುಷಿತ ನೀರು ಸರಬರಾಜು ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಆರೋಪ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಇದೇ ಮಾರ್ಚ್‌ 11ರಂದು ಗ್ರಾಮದ 55 ವರ್ಷದ ಸಾಬಯ್ಯ, ಮಾರ್ಚ್ 18ರಂದು 52 ವರ್ಷದ ಹನುಮಂತ, ಮಾರ್ಚ್‌ 29ರಂದು ಶಾಂತಮ್ಮ ಹಾಗೂ ಏ.1ರಂದು 50 ವರ್ಷದ ಲಿಂಗಾರೆಡ್ಡಿ, ಕೇವಲ ಹದಿನೈದು ದಿನಗಳ ಅಂತರದಲ್ಲೇ ಮೃತಪಟ್ಟಿದ್ದಾರೆ.

ಹೊಟ್ಟೆನೋವು ಹಾಗೂ ವಾಂತಿಬೇಧಿಯಿಂದ ಅವರು ನರಳುತ್ತಿದ್ದರು ಎನ್ನಲಾಗಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಕೆಲವರು ಗ್ರಾಮಕ್ಕೆ ಮರಳುವಾಗ ದಾರಿ ಮಧ್ಯೆ ಹಾಗೂ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಹದಗೆಟ್ಟ ನೀರಿನ ಅವ್ಯವಸ್ಥೆ ಹಾಗೂ ಗ್ರಾಮದ ಟ್ಯಾಂಕಿಗೆ ಕೆರೆಯ ಬಳಿ ಹಾಕಲಾಗಿರುವ ಪೈಪ್‌ಲೈನ್‌ ಮಾರ್ಗದಲ್ಲೇ ಸಾಮೂಹಿಕ ಬಹಿರ್ದೆಸೆಯಿಂದಾಗಿ, ಮಲಮಿಶ್ರಿತ-ಕಲುಷಿತ ತ್ಯಾಜ್ಯ ಈ ಮೂಲಕ ಜನರ ಹೊಟ್ಟೆ ಸೇರಿ ಸಾವು-ನೋವುಗಳಿಗೆ ಕಾರಣವಾಗುತ್ತಿದೆ.

ಬರ- ಬಿರು ಬಿಸಿಲಿನಂತಹ ಸಂಕಷ್ಟದ ಸಮಯದಲ್ಲಿ ಉಂಟಾದ ಕುಡಿಯುವ ನೀರಿನ ತತ್ವಾರದ ವೇಳೆ, ಮುಗ್ಧರ ಈ ಸಾವುಗಳು ಮಲಮಿಶ್ರಿತ-ಕಲುಷಿತ ನೀರು ಸೇವಿಸಿದ್ದರಿಂದ ಆಗಿದೆ ಎಂಬ ಮಾತುಗಳು ಅಲ್ಲಿಪೂರದಲ್ಲಿ ಪ್ರತಿಧ್ವನಿಸುತ್ತಿವೆ. ಕುಡಿಯುವ ನೀರಿನಿಂದಾಗುತ್ತಿರುವ ಈ ಸಾವು-ನೋವುಗಳ ಕುರಿತು, ಇದೇ ಏ.4ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಾವು (ಅನಸೂಯ) ಮನವಿ ಸಲ್ಲಿಸಿದ್ದೆವು. ರಾತೋರಾತ್ರಿ ನಮ್ಮ ಗ್ರಾಮಕ್ಕೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು ಕಲುಷಿತ ನೀರು ಉಂಟಾಗುವ ಜಾಗೆಯ ನೀರಿನ ಮಾದರಿ ಸಂಗ್ರಹಿಸದೆ, ಮನೆಯೊಂದರಲ್ಲಿನ ಬೋರ್ವೆಲ್‌ ನೀರು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದರು ಎಂದು ಗ್ರಾಮದ ದೇವಿಂದ್ರಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.

ತಂದೆಗೆ ಲೋಬಿ ಆಗಿದ್ದರಿಂದ ತೀರಿಕೊಂಡರು ಎಂದು ತಿಳಿದಾಗ ಊರಿಂದ ಬಂದೆನು.. ಎಂದು ಇದೇ ಏ.1ರಂದು ಮೃತಪಟ್ಟ ಲಿಂಗಾರೆಡ್ಡಿ ಅವರ ಪುತ್ರ ಬಸುಗೌಡ, ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಜೀವಜಲವೇ ಮುಗ್ಧರ ಜೀವ ಪಡೆಯುತ್ತಿರುವ ಪ್ರಕರಣಗಳು ಮುಂದುವರೆದಂತಿವೆ. ಕಲುಷಿತ ನೀರು ಸೇವಿಸಿ, ಕಳೆದ ವರ್ಷೊಪ್ಪತ್ತಿನಲ್ಲೇ ಹತ್ತಾರು ಜನರ ಜೀವ ಪಡೆದು, ನೂರಾರು ಜನರ ಅಸ್ವಸ್ಥೆಗೆ ಸಾಕ್ಷಿಯಾಗಿದ್ದ ಯಾದಗಿರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ದುರದೃಷ್ಟಕರ. ಕಳೆದ ಅಧಿವೇಶನದಲ್ಲಿ ಇಂತಹ ಪ್ರಕರಣಗಳು ಕುರಿತು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕನ್ನಡಪ್ರಭದ ಸರಣಿ ವರದಿಗಳು ಸರ್ಕಾರವನ್ನು ಬಡಿದೆಚ್ಚರಿಸಿದ್ದವು.ಜೀವಜಲದಿಂದ ಜೀವ ಕಳೆದುಕೊಂಡ ಪ್ರಕರಣಗಳು..!

- 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಸುರಪುರ ತಾಲೂಕಿನ ಮಾಚಗುಂಡಾಳದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಚರಂಡಿ ನೀರು ಸೇರಿದ್ದ ಪರಿಣಾಮ, 150ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಇಬ್ಬರು ಮೃತಪಟ್ಟಿದ್ದರು.

- 2022ರ ಅಕ್ಟೋಬರ್‌ನಲ್ಲಿ ಶಹಾಪುರ ತಾಲೂಕಿನ ಹೋತಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದರು. 200ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿದ್ದರು.

- ಗುರುಮಠಕಲ್ ತಾಲೂಕಿನ ಅನಪುರದಲ್ಲಿ 2023 ಫೆಬ್ರವರಿಯಲ್ಲಿ ಮಲಮಿಶ್ರಿತ ಕಲುಷಿತ ನೀರು ಕುಡಿದು ಮೂವರು ಮೃತಪಟ್ಟು, 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಬೋರವೆಲ್ ಮೂಲಕ ಮನೆಗಳಿಗೆ ಸರಬರಾಜಾಗುತ್ತಿದ್ದ ನೀರಿನ ಪೈಪ್‌ಲೈನ್‌ನಲ್ಲಿ ಸೋರಿಕೆಯಿಂದ ಚರಂಡಿ ನೀರು ಸೇರ್ಪಡೆಯಾಗಿತ್ತು.

- ಗುರುಮಠಕಲ್ ತಾಲೂಕಿನ ಚಿನ್ನಾಕಾರದಲ್ಲಿ 2023 ''''''''''''''''ಫೆಬ್ರವರಿಯಲ್ಲಿ ಜನರು ಅಸ್ವಸ್ಥ ಗೊಂಡಿದ್ದರು. ಇಲ್ಲಿ ನೀರು ಪೂರೈಕೆಯಾಗುವ ಟ್ಯಾಂಕಿನಲ್ಲಿ ಕಾಗೆ ಸತ್ತು ಬಿದ್ದಿತ್ತು. ಕಲುಷಿತ ನೀರು ಸೇವಿಸಿ ದಂತಾಪುರದಲ್ಲಿ ಮಾರ್ಚ್ ತಿಂಗಳಲ್ಲಿ 55 ಜನರು ಅಸ್ವಸ್ಥಗೊಂಡಿದ್ದರು. ಹಿಮಲಾಪುರದಲ್ಲಿ ಜೂನ್ ತಿಂಗಳಲ್ಲಿ 97ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರೆ, ಗಾಜರಕೋಟ್ ನಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ 25 ಜನರಿಗೆ ವಾಂತಿಭೇದಿಯಾಗಿ ಅಸ್ವಸ್ಥಗೊಂಡಿದ್ದರು.

- ಹುಣಸಗಿ ತಾಲೂಕಿನ ಮಾರಲಭಾವಿಯಲ್ಲಿ 5 2023 ಆಗಸ್ಟ್ ತಿಂಗಳಲ್ಲಿ ಕಲುಷಿತ ನೀರು ಸೇವಿಸಿ 10 ಜನರು ಅಸ್ವಸ್ಥಗೊಂಡಿದ್ದರು. ಚಿಕ್ಕನಹಳ್ಳಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 40 ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದರು. ಕೆಂಭಾವಿಯ ಯುಕ್ತಾಪುರದಲ್ಲಿ ವಸತಿ ನಿಲಯದ ಮಕ್ಕಳು ಅಸ್ವಸ್ಥಗೊಂಡಿದ್ದರು.

Share this article