ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಯರಗನಹಳ್ಳಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಸಂಶಯಾಸ್ಪದ ಸಾವಿನ ಘಟನೆ ಕುರಿತು ಉನ್ನತ ತನಿಖೆ ನಡೆಸುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.ಯರಗನಹಳ್ಳಿಯ ಡಾ. ರಾಜಕುಮಾರ್ ರಸ್ತೆಯಲ್ಲಿನ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ನೆರೆಹೊರೆಯವರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಮೃತರಾದ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಮಂಜುಳಾ, ಪುತ್ರಿಯರಾದ ಅರ್ಚನಾ ಹಾಗೂ ಸ್ವಾತಿ ಅವರೊಂದಿಗೆ ವಾರದ ಹಿಂದೆ ಚಿಕ್ಕಮಗಳೂರಿಗೆ ಮದುವೆಗೆ ತೆರಳಿ ಭಾನುವಾರವಷ್ಟೆ ಮೈಸೂರಿಗೆ ಆಗಮಿಸಿದ್ದರು.ಆದರೆ ಮಾರನೇ ದಿನವೇ ಇಂತಹ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಆಕಸ್ಮಿಕ ಘಟನೆಯೇ? ಕುಟುಂಬದವರೇ ಮಾಡಿಕೊಂಡಿರುವ ಆತ್ಮಹತ್ಯೆಯೇ? ಅಥವಾ ಪೂರ್ವ ನಿಯೋಜಿತ ಹತ್ಯೆಯೇ? ಎಂಬ ಅನುಮಾನ ಜನರಿಂದ ಚರ್ಚಿತವಾಗುತ್ತಿದೆ. ಅಲ್ಲದೆ ಇಲ್ಲಿನ ನಿವಾಸಿಗಳು ಇಂತಹ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಮಾಡಿ ಸತ್ಯಸಂಗತಿಯನ್ನು ಬಯಲಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಡುಗೆ ಅನಿಲ ಸೋರಿಕೆಯಿಂದ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಮೃತರು ಬಳಸುತ್ತಿದ್ದ ಇಸ್ತ್ರಿ ಪೆಟ್ಟಿಗೆಗೆ ಅಳವಡಿಸಿದ್ದ ಅನಿಲವು ಹೊರ ಸೂಸುವಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಯಾವುದೇ ಅನಿಲವಾಗಲಿ ಅದರ ವಾಸನೆಯ ಘಾಟು ಮೂಗಿಗೆ ಬಡಿದು ನಿದ್ರಿಸುವವರನ್ನು ಎಚ್ಚರಿಸಬಲ್ಲದು. ಮಲಗಿದ್ದ ನಾಲ್ವರಲ್ಲಿ ಯಾರಿಗೂ ಜೋರಾದ ಕೆಮ್ಮು ಬಾರದೆ, ಯಾರೊಬ್ಬರು ಅಲ್ಲಿಂದ ಹೊರ ಬರಲು ಪ್ರಯತ್ನಿಸದೆ, ಮಲಗಿದ್ದ ಜಾಗದಲ್ಲಿಯೇ ನಾಲ್ವರು ಸತ್ತಿರುವುದು ಶೋಚನೀಯ ಸಂಗತಿ ಎಂದಿದ್ದಾರೆಅಲ್ಲದೆ ಒತ್ತು ಗೊಡೆಯ ಮನೆಗಳಿರುವ ಈ ಪ್ರದೇಶದಲ್ಲಿ ಮಾರನೇ ದಿನ ಅಕ್ಕಪಕ್ಕದವರಿಗೆ ಅನಿಲ ಸೋರಿಕೆ ವಾಸನೆ ಬಾರದಿರುವುದು ಅನುಮಾನಕ್ಕೂ ಕಾರಣವಾಗಿದೆ. ಮೂರು ದಿನದ ನಂತರ ಕುಮಾರಸ್ವಾಮಿ ಅವರ ಸ್ನೇಹಿತರೊಬ್ಬರು ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದ ಕಾರಣ ಮನೆಗೆ ಬಂದು ನೋಡಿದಾಗ ಘಟನೆ ಬಳಕಿಗೆ ಬಂದಿದೆ. ಅದ್ದರಿಂದ ಈ ಘಟನೆಯು ಹಲವು ಶಂಕೆ ಮೂಡಿಸಿದೆ ಎಂದಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದುಳಿದ ಹಾಗೂ ಬಡತನದ ಕುಟುಂಬಗಳಲ್ಲಿ ಇಡೀ ಕುಟುಂಬವೇ ಸಾವಿಗೆ ಗುರಿಯಾಗುತ್ತಿರುವುದು ಮತ್ತು ಪ್ರಾಯದ ಹೆಣ್ಣು ಮಕ್ಕಳ ಹತ್ಯೆಯಾಗುತ್ತಿರುವುದು ಆತಂಕವನ್ನು ಮೂಡಿಸುತ್ತಿದೆ. ಅನುಮಾನಕ್ಕೂ ಕಾರಣವಾಗುತ್ತಿದೆ. ಸರ್ಕಾರ ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಬೇಕು ಹಾಗೂ ಜನರು ನೆಮ್ಮದಿಯಾಗಿ ಜೀವನ ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.