ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ರೈತರೊಬ್ಬರ ಮೇಕೆ ಫಾರಂನಲ್ಲಿ ಕ್ರಷರ್ ಧೂಳಿನಿಂದ ಮೇಕೆಗಳು ಸಾವನ್ನಪ್ಪುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರ ಪರ ವಕೀಲ ಕೆ.ವಿ.ಹೃತಿಕ್‌ಗೌಡ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳೇನಹಳ್ಳಿಯ ಸರ್ವೆ ನಂ.30/5ರಲ್ಲಿರುವ ಎಚ್.ಎಸ್. ಶರತ್‌ಕುಮಾರ್ ಅವರಿಗೆ ಸೇರಿದ 4.2 ಎಕರೆ ಜಮೀನಿನಲ್ಲಿ ಕಳೆದ 5 ವರ್ಷಗಳಿಂದ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಜಮೀನಿಗೆ ಸಮೀಪದಲ್ಲಿರುವ ಎನ್‌ಎನ್ ಸ್ಟೋನ್ ಕ್ರಷರ್‌ನಿಂದ ಹೊರಬೀಳುತ್ತಿರುವ ಧೂಳು ಮೇವಿನ ಮೇಲೆ ಬಿದ್ದು ಅದನ್ನು ಮೇಕೆಗಳು ತಿಂದು ಸಾವನ್ನಪ್ಪುತ್ತಿವೆ ಎಂದು ದೂರಿದರು.ಮೇಕೆಗಳ ಸಾವಿನ ಬಗ್ಗೆ ಕಾರಣ ತಿಳಿಯಲು ಅವುಗಳನ್ನು ಶವ ಪರೀಕ್ಷೆಗೆ ಒಳಪಡಿಸಿದಾಗ ಗಣಿ ಧೂಳು ಬಿದ್ದ ಮೇವನ್ನು ಸೇವಿಸಿದ್ದರಿಂದ ಮೇಕೆಗಳು ಸಾವನ್ನಪಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ನಂತರ ಕ್ರಷರ್ ವಿರುದ್ಧ ರೈತ ಶರತ್‌ಕುಮಾರ್, ನ್ಯಾಯಾಲಯದ ಮೊರೆ ಹೋದರು. ಶರತ್‌ಕುಮಾರ್ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಎನ್‌ಎನ್ ಸ್ಟೋನ್ ಕ್ರಷರ್ ಸ್ಥಗಿತಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ ಎಂದು ವಿವರಿಸಿದರು.ನ್ಯಾಯಾಲಯ ಎನ್‌ಎನ್ ಕ್ರಷರ್ ನಡೆಸದಂತೆ ತಡೆಯಾಜ್ಞೆ ನೀಡಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕ್ರಷರ್ ನಡೆಸುತ್ತಿದ್ದಾರೆ. ಈ ವಿಷಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ರೈತ ಎಚ್.ಎಸ್.ಶರತ್ ಕುಮಾರ್ ಮಾತನಾಡಿ, ರೈತರ ಒಪ್ಪಿಗೆ ಇಲ್ಲದೇ ಅನಧಿಕೃತವಾಗಿ ನನ್ನ ಜಮೀನಿನ ಪಕ್ಕದಲ್ಲಿ ಎಂಟು ತಿಂಗಳಿಂದ ಎನ್.ಎನ್.ಸ್ಟೋನ್ ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಮೇಕೆ ಸಾಕಾಣಿಕೆಗೆ ತೀವ್ರ ತೊಂದರೆಯಾಗಿದೆ. ಈ ಎಂಟು ತಿಂಗಳಲ್ಲಿ ಒಟ್ಟು 28 ಮೇಕೆಗಳು ಸತ್ತು ಹೋಗಿವೆ. ಕಾನೂನಿಗೆ ಬೆಲೆ ಕೊಡಲಿಲ್ಲ ಎಂದರೆ, ರೈತರ ಜೊತೆಗೂಡಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ನಮ್ಮ ಗ್ರಾಮದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಕ್ರಷರ್‌ಗಳ ಹಾವಳಿ ಹೆಚ್ಚಿದೆ. ಅರಣ್ಯಕ್ಕೆ ಸೇರಿದ ಸ್ಥಳಗಳನ್ನು ಗಣಿಗಾರಿಕೆಗಾಗಿ ಬಳಸುತ್ತಿದ್ದರೂ ಸಹ ಅರಣ್ಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಗಣಿ ಮತ್ತು ಭೂ ವಿeನ ಇಲಾಖೆಯವರು ಸಹ ತಲೆ ಕಡೆಸಿಕೊಳ್ಳದೇ ಇವರಿಗೇ ಸಾಥ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿನಯ್‌ಕುಮಾರ್, ಶರತ್‌ಕುಮಾರ್, ವಿಶ್ವ ಇದ್ದರು.