ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಶುಕ್ರವಾರ ರಾತ್ರಿ ಕೇರಳ ಹಾಗೂ ಬಂಡೀಪುರ ಅರಣ್ಯ ಇಲಾಖೆ ಹಾಗು ಪಶು ವೈದ್ಯರ ತಂಡ ಸದರಿ ಆನೆಯನ್ನು ಮಾನಂದವಾಡಿ ನಗರದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡಿ ಶುಕ್ರವಾರ ಸಂಜೆ ಸೆರೆ ಹಿಡಿದರು. ಸೆರೆ ಹಿಡಿದ ಆನೆಯನ್ನು ಶುಕ್ರವಾರ ರಾತ್ರಿ 10ರ ಸಮಯದಲ್ಲಿ ಲಾರಿಗೇರಿಸಿಕೊಂಡು ಬರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ರಾಂಪುರ ಸಾಕಾನೆ ಶಿಬಿರಕ್ಕೆ ಮೃತ ಆನೆಯ ಜೊತೆ ಬಂದ ಕೇರಳ ರಾಜ್ಯದ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿಯೋಜನೆ ಪಶು ವೈದ್ಯರು, ಬಂಡೀಪುರ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳು ಹಾಗೂ ಇತರೆ ಕೇರಳ ರಾಜ್ಯ ಹಾಗು ಬಂಡೀಪುರ ಹುಲಿ ಯೋಜನೆಯ ಸಿಬ್ಬಂದಿಗಳು ಆನೆ ಸತ್ತಿರುವುದನ್ನು ಖಚಿತ ಪಡಿಸಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ಕುಮಾರ್ ಹಾಗೂ ಕೇರಳ ರಾಜ್ಯದ ವೈನಾಡು ಉತ್ತರ ಮತ್ತು ದಕ್ಷಿಣ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೆಡಿಯಾಲ ಎಸಿಎಫ್ ಕೆ. ಪರಮೇಶ್,ಆರ್ ಎಫ್ ಒ ಪುನೀತ್‌ಕುಮಾರ್ ಸಮ್ಮುಖದಲ್ಲಿ ಸತ್ತ ಆನೆಯ ಮರಣೋತ್ತರ ಪರೀಕ್ಷೆಯನ್ನು ಡಾ.ಅಜೇಶ್ ಮಾಡಿದರು. ತಣ್ಣೀರು ಕಾಡಾನೆಯು ಹೃದಯಾಘಾತ ಮತ್ತು ಟ್ರಾಮ ಕಾರಣದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅರಣ್ಯ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಸತ್ತ ತಣ್ಣೀರು ಆನೆಯ ದೇಹದ ಕೆಲವು ಅಂಗಾಂಗಳ ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಿದೆ. ಬಳಿಕ ಆನೆಯ ಮೃತ ದೇಹವನ್ನು ಅದೇ ಸ್ಥಳದಲ್ಲಿ ಸ್ವಾಭಾವಿಕವಾಗಿ ಬಿಡಲಾಯಿತು.