ಮಾಹಿತಿ ಕೊರತೆಯಾಗಿದೆ, ಆದರೆ ಅವ್ಯವಹಾರವಾಗಿಲ್ಲ: ಕರೀಮ ಅಸಾದಿ ಸ್ಪಷ್ಟನೆ

KannadaprabhaNewsNetwork |  
Published : Feb 04, 2024, 01:36 AM IST
ಯಲ್ಲಾಪುರ ತಾಪಂನಲ್ಲಿ ಜಿಪಂ ಯೋಜನೆಯ ಅಧಿಕಾರಿ ಕರೀಮ್ ಅಸಾದಿ ಯೋಜನೆಯ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಶನಿವಾರ ಯಲ್ಲಾಪುರದ ಲಿಂಗದಬೈಲ್‌ನಲ್ಲಿ ಉದ್ಘಾಟನೆ ಆಗಬೇಕಿದ್ದ ಟ್ರೈಬಲ್ ಹೋಮ್ ಸ್ಟೇ ಅತಿಥಿಗಳು ಬಾರದೇ, ಸಮುದಾಯದ ನಡುವೆಯೇ ಉಂಟಾದ ಗೊಂದಲದಿಂದ ಉದ್ಘಾಟನೆ ಆಗದೇ ಇರುವ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಯಾವುದೇ ಅವ್ಯವಹಾರವಾಗಿಲ್ಲ ಎಂದಿದ್ದಾರೆ.

ಯಲ್ಲಾಪುರ: ದಮಾಮಿ ಸಮುದಾಯ ಪ್ರವಾಸೋದ್ಯಮದ ಹೋಮ್ ಸ್ಟೇ ವ್ಯವಹಾರದಲ್ಲಿ ಮಾಹಿತಿಯ ಕೊರತೆ ಆಗಿದೆಯೇ ವಿನಃ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಪಂ ಯೋಜನೆಯ ಅಧಿಕಾರಿ ಕರೀಮ ಅಸಾದಿ ಹೇಳಿದರು.

ಶನಿವಾರ ಉದ್ಘಾಟನೆ ಆಗಬೇಕಿದ್ದ ಟ್ರೈಬಲ್ ಹೋಮ್ ಸ್ಟೇ ಅತಿಥಿಗಳು ಬಾರದೇ, ಸಮುದಾಯದ ನಡುವೆಯೇ ಉಂಟಾದ ಗೊಂದಲದಿಂದ ಉದ್ಘಾಟನೆ ಆಗದೇ ಇರುವ ಕಾರಣಕ್ಕೆ ಅವರು ತಾಲೂಕು ಪಂಚಾಯಿತಿಯಲ್ಲಿ ಅವರು ಯೋಜನೆಯ ಮಾಹಿತಿ ನೀಡಿದರು.

ಬುಡಕಟ್ಟು ಸಮುದಾಯದವರ ಸಂಸ್ಕೃತಿಯನ್ನು ಪರಿಚಯಿಸಿ, ಅವರ ಆಹಾರ, ವಿಹಾರ, ಕಲೆಯನ್ನು ಹೊರನಾಡಿಗೆ ಪರಿಚಯಿಸಲು ಪ್ರವಾಸೋದ್ಯಮದ ಈ ಯೋಜನೆ ರೂಪಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಮೊದಲು. ಈ ಯೋಜನೆಯ ಮಾಹಿತಿಯನ್ನು ಮೊದಲೇ ಎಲ್ಲರಿಗೂ ತಿಳಿಸಬೇಕಿತ್ತು, ನಮ್ಮಿಂದ ತಪ್ಪಾಗಿದೆ. ಕೇರಳದ ಕಬಿನಿ ಸಮಸ್ಥೆಯವರು ಈ ಸ್ವ ಸಹಾಯ ಸಂಘದ ಸದಸ್ಯರಿಗೆ ವ್ಯವಹಾರದ, ಶಿಷ್ಟಾಚಾರದ ತರಬೇತಿ ನೀಡುತ್ತಾರೆಯೇ ವಿನಃ ಇದರಲ್ಲಿ ಕಬಿನಿ ಸಂಸ್ಥೆಯವರ ಯಾವುದೇ ಪಾಲುದಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. 10 ವರ್ಷದ ಲೀಸಿಗೆ ಭೂಮಿ ಪಡೆಯಲಾಗಿದ್ದು, ಇದನ್ನು ಮುಂದುವರಿಸಬೇಕೆಂಬ ಕರಾರು ಕೂಡ ಒಡಂಬಡಿಕೆಯಲ್ಲಿದೆ. ಇದೊಂದು ಮಾದರಿ ಯೋಜನೆಯಾಗಿದ್ದು, ಇದರ ಸಫಲತೆಯ ಆಧಾರದ ಮೇರೆಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು ಎಂದ ಅವರು, ಯಾವುದೇ ಮಾಹಿತಿ ಕೇಳಿದಲ್ಲಿ ನೀಡಲು ನಾವು ಸಿದ್ಧರಿದ್ದೇವೆ. ಒಂದು ವೇಳೆ ತಪ್ಪುಗಳೇನಾದರೂ ಆಗಿದ್ದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಪಂ ಪ್ರಭಾರಿ ಇಒ ಎನ್.ಆರ್. ಹೆಗಡೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಕಲ್ಮನಿ, ಸೀತಾರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಜೋಶಿ ಇದ್ದರು.

ಏನಾಗಿತ್ತು?: ಯಲ್ಲಾಪುರ ತಾಲೂಕಿನ ಲಿಂಗನಬೈಲ್‌ನಲ್ಲಿ ಇಡಗುಂದಿ ಗ್ರಾಪಂ ವ್ಯಾಪ್ತಿಯ ಲಿಂಗನಬೈಲ್‌ನಲ್ಲಿ ಎನ್.ಆರ್.ಎಲ್.ಎಂ. ಯೋಜನೆಯಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸಿದ್ದಿ ಜನರ ಆರ್ಥಿಕ ಅಭಿವೃದ್ಧಿಗಾಗಿ ಸುಮಾರು ₹೭೩ ಲಕ್ಷ ವೆಚ್ಚದಲ್ಲಿ ದಮಾಮಿ ಸಮುದಾಯ ಪ್ರವಾಸೋದ್ಯಮ ಎಂಬ ಕಟ್ಟಡ ನಿರ್ಮಿಸಲಾಗಿದೆ. ಫೆ. 3ರಂದು ಉದ್ಘಾಟನೆ ನಿಗದಿಯಾಗಿತ್ತು. ಆದರೆ ವಿರೋಧದಿಂದ ಅಧಿಕಾರಿಗಳು ಉದ್ಘಾಟನೆ ಬಂದಿಲ್ಲ. ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದ ಉದ್ಘಾಟನೆಗೆ ಆಗಮಿಸಿದ್ದರಾದರೂ ಗೊಂದಲದ ಹಿನ್ನೆಲೆಯಲ್ಲಿ ಉದ್ಘಾಟಿಸದೇ ಮರಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ