ಹುಲಿಗಳ ಸಾವು, ರಾಜ್ಯದ ಆರ್ಥಿಕ ಸ್ಥಿತಿಗೆ ಸಂಸದ ಬೊಮ್ಮಾಯಿ ಕಳವಳ

KannadaprabhaNewsNetwork |  
Published : Jun 28, 2025, 12:26 AM ISTUpdated : Jun 28, 2025, 02:02 PM IST
Bharatiya Janata Party MP Basavaraj Bommai (File photo/ANI)

ಸಾರಾಂಶ

ರಾಜ್ಯದಲ್ಲಿ ಇತ್ತೀಚೆಗೆ ಐದು ಹುಲಿಗಳು ಸಾವನ್ನಪ್ಪಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಗದಗ: ರಾಜ್ಯದಲ್ಲಿ ಇತ್ತೀಚೆಗೆ ಐದು ಹುಲಿಗಳು ಸಾವನ್ನಪ್ಪಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಗದಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 4 ಹುಲಿ ಮರಿಗಳು ಮತ್ತು 1 ತಾಯಿ ಹುಲಿ ಸಾವನ್ನಪ್ಪಿರುವುದು ಆಘಾತಕಾರಿ, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ, ಅರಣ್ಯದ ಸಮೀಪ ರೆಸಾರ್ಟ್‌ಗಳಿಗೆ ಅನುಮತಿ ನೀಡಲಾಗುತ್ತಿದೆ, ಹಾಗೂ ಜನರಿಗೆ ಪಿಕ್ನಿಕ್‌ಗಳಿಗೆ ಅವಕಾಶ ನೀಡಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ ಅರಣ್ಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಬೆಂಗಳೂರಿನಲ್ಲಿರುವ ಐಎಫ್‌ಎಸ್‌ ಅಧಿಕಾರಿಗಳನ್ನು ಕಾಡಿಗೆ ಕಳುಹಿಸಬೇಕು ಎಂದು ಅವರು, ತಮ್ಮ ಆಡಳಿತಾವಧಿಯಲ್ಲಿ ಅಧಿಕಾರಿಗಳನ್ನು ಕಾಡಿನ ಸಮೀಪ ನಿಯೋಜಿಸಲಾಗಿತ್ತು. ಈಗ ಫಾರೆಸ್ಟರ್‌ಗಳು ಮತ್ತು ಗಾರ್ಡ್‌ಗಳನ್ನು ಬಿಟ್ಟರೆ ಕಾಡು ಕಾಯುವವರಿಲ್ಲ. ಅರಣ್ಯದ ಬಗ್ಗೆ ಗಂಭೀರ ಆಡಳಿತ ನಡೆಸುವವರು ಯಾರು ? ಎಂದು ಅವರು ಪ್ರಶ್ನಿಸಿದ್ದಾರೆ. ಅರಣ್ಯ ನಾಶ, ಕಳ್ಳಸಾಗಣೆ ಮತ್ತು ಮಾನವ-ಪ್ರಾಣಿ ಸಂಘರ್ಷ ತೀವ್ರ ಕಳವಳಕಾರಿಯಾಗಿದೆ. ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದ ಬಗ್ಗೆ ಮತ್ತು ಹುಲಿ ಚರ್ಮದ ಕಳ್ಳಸಾಗಣೆಯ ಸಾಧ್ಯತೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಆರ್ಥಿಕ ಪರಿಸ್ಥಿತಿ, ಭ್ರಷ್ಟಾಚಾರದ ಆರೋಪ

ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಶೂನ್ಯವಾಗಿದೆ. ಕರ್ನಾಟಕ ಸಾಲದ ಶೂಲಕ್ಕೆ ಸಿಲುಕಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಹೆಚ್ಚುವರಿ 50 ರಿಂದ 60 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದ್ದರೂ, ಹಣ ಎಲ್ಲಿಗೆ ಹೋಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸಚಿವ ಜಮೀರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಬೊಮ್ಮಾಯಿ, ಕೇವಲ ಬಿ.ಆರ್. ಪಾಟೀಲ್ ಕ್ಷೇತ್ರದಲ್ಲಷ್ಟೇ ಅಲ್ಲದೆ, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಗೃಹ ಹಂಚಿಕೆಯಲ್ಲಿ ಅವ್ಯವಹಾರ ನಡೆದರೆ ಯಾರು ಹೊಣೆ ? ಬಿ.ಆರ್. ಪಾಟೀಲ್ ಅವರು ಆರೋಪ ಮಾಡಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಭ್ರಷ್ಟಾಚಾರದಲ್ಲಿ ಎಲ್ಲರ ಪಾಲಿರುವುದನ್ನು ಸೂಚಿಸುತ್ತದೆ. ಮುಖ್ಯಮಂತ್ರಿಗಳ ಅಸಹಾಯಕತೆ ಇದರಿಂದ ಸ್ಪಷ್ಟವಾಗುತ್ತದೆ ಹಾಗೂ ಪ್ರಸ್ತುತ ಸರ್ಕಾರ ಅತ್ಯಂತ ಅಸಹಾಯಕ ಮತ್ತು ದುರ್ಬಲ ಸರ್ಕಾರವಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಮುಂತಾದವರು ಹಾಜರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿ : ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ, ಈ ಬಗ್ಗೆ ವರಿಷ್ಠರು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಬಿ.ವೈ. ವಿಜಯೇಂದ್ರ ಅವರು ಮುಂದುವರಿಯುತ್ತಾರೋ ಅಥವಾ ಬದಲಾಗುತ್ತಾರೋ ಎಂದು ಊಹಿಸುವುದು ಸಾಧ್ಯವಿಲ್ಲ ಎಂದು ಹೇಳಿದರು. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ