ನವಲಗುಂದ: ರೈತರ ಪರವಾಗಿ, ರಾಜಕೀಯ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡದಂತೆ ಕಳಸಾ - ಬಂಡೂರಿ, ಮಹದಾಯಿ ಹೋರಾಟಗಾರರಾದ ರಘುನಾಥ ನಡುವಿನಮನಿ ಹಾಗೂ ಶಂಕ್ರಪ್ಪ ಅಂಬಲಿ ಅವರಿಗೆ ಅನಾಮಧೇಯ ಜೀವಬೆದರಿಕೆ ಪತ್ರ ಬಂದಿದೆ.
ಕಳಸಾ- ಬಂಡೂರಿ ಮಹದಾಯಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಇದು ರಣಹೇಡಿಗಳು ಮಾಡುವ ಕೆಲಸ. ರಾಜಕೀಯ ಪಕ್ಷಗಳು ನಮ್ಮ ಹೋರಾಟ ಹತ್ತಿಕ್ಕಲು ನಮ್ಮಿಬ್ಬರು ರೈತ ಹೋರಾಟಗಾರರ ವಿರುದ್ಧ ಮಾಡಿರುವ ಕುತಂತ್ರ ಇದಕ್ಕೆ ನಾವು ಜಗ್ಗುವುದಿಲ್ಲ. ನಿಮಗೆ ತಾಕತ್ತಿದ್ದರೆ ನಮ್ಮ ಜೀವ ತೆಗೆಯಿರಿ. 2015ರಿಂದ ನಿರಂತರ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಆದರೂ ನಾವು ನಮ್ಮ ಹೋರಾಟ ನಿಲ್ಲಿಸಿಲ್ಲ. ಕಾನೂನು ಮೂಲಕ ತಪ್ಪಿತಸ್ಥರಿಗೆ ಕ್ರಮ ಆಗಬೇಕು ಎಂದು ಒತ್ತಾಯಿಸುತ್ತೇನೆ. ಅಲ್ಲದೇ ಇದ್ಯಾವುದಕ್ಕೂ ಹೆದರದೇ ಇನ್ನು ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಫಕ್ಕೀರಗೌಡ ವೆಂಕನಗೌಡ, ಬಸವರಾಜ ಓಲೇಕಾರ, ನಾಗಪ್ಪ, ಸಿದ್ದಪ್ಪ ತುಳಸಿಗೇರಿ, ವೀರಯ್ಯ ಹಿರೇಮಠ, ಬಸವಂತಪ್ಪ ಹಡಪದ, ದೇವೇಂದ್ರಪ್ಪ ಗುಡಿಸಾಗರ, ನಿಂಗಪ್ಪ ಬಡಿಗೇರ, ಶಿವಾನಂದ ಚಿಕ್ಕನರಗುಂದ ಇತರರಿದ್ದರು.ಪತ್ರದಲ್ಲೇನಿದೆ?: ರೈತ ಸಂಘಟನೆಯಿಂದ ರೈತರ ಪರವಾಗಿ ಹೋರಾಟ ಮಾಡುವುದಾಗಲಿ, ರಾಜಕೀಯ ವ್ಯಕ್ತಿಗಳ ಮುಂದೆ ಧರಣಿ, ಹೋರಾಟ ಮಾಡಬಾರದು. ಮಾಡಿದರೆ ನಿಮ್ಮ ಪ್ರಾಣವಾಗಲಿ, ಕೈ ಕಾಲು ಮುರಿದರೆ ನಾವು ಜವಾಬ್ದಾರರಲ್ಲ. ನಾವು ನಿಮಗೆ ಹಣಕಾಸಿನ ನೆರವು ಮಾಡಿಕೊಡುತ್ತೇವೆ ಎಂದರೆ ನೀವು ಒಪ್ಪುತ್ತಿಲ್ಲ, ಸೂಕ್ಷ್ಮವಾಗಿ ಹೇಳಿದರೆ ಕೇಳುತ್ತಿಲ್ಲ, ರಾಜಕೀಯ ವಿರೋಧ ಮಾಡಿಕೊಳ್ಳುತ್ತಿದ್ದೀರಿ. ಇದು ನಿಮಗೆ ಕೊನೆಯ ಎಚ್ಚರಿಕೆ. ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿದೆ ಎಂದು ಬೆದರಿಕೆಯ ಪತ್ರದಲ್ಲಿ ಬರೆಯಲಾಗಿದೆ.