ಹುಬ್ಬಳ್ಳಿ: ಇಲ್ಲಿನ ನವನಗರದಲ್ಲಿ ಮಜೇಥಿಯಾ ಫೌಂಡೇಶನ್ ಸ್ಥಾಪಿಸಿರುವ (ರಮೀಲಾ ಪ್ರಶಾಂತಿ ಮಂದಿರ) ಹಾಸ್ಪೈಸ್ ನೋವಿನ ಬದುಕಿಗೆ ನೆಮ್ಮದಿಯ ತಾಣವಾಗಿ ಪರಿಣಮಿಸಿದೆ.
ರೋಗಿಗಳಿಗೆ ಉಚಿತ ಉಪಶಮನ ಆರೈಕೆ ಸೌಲಭ್ಯವಿರುವ ಕೇಂದ್ರವೇ ಹಾಸ್ಪೈಸ್. ಯುರೋಪ್, ಅಮೆರಿಕ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಇಂತಹ ಸೌಲಭ್ಯ ಇದೆ. ಉತ್ತರ ಕರ್ನಾಟಕದ ರೋಗಿಗಳಿಗೂ ಈ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಮಜೇಥಿಯಾ ಫೌಂಡೇಶನ್ ಇಲ್ಲಿನ ನವನಗರದ ದಿ ಕರ್ನಾಟಕ ಕ್ಯಾನ್ಸರ್ ಥೆರಪಿ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಸ್ಥಾಪಿಸಿದೆ.
ಕ್ಯಾನ್ಸರ್‌ನ ಅಂತಿಮ ಘಟ್ಟದಲ್ಲಿ ದೇಹವು ಹಿಂಡಿ ಹಿಪ್ಪೆಯಾಗಿರುತ್ತದೆ. ಯಾವ ಚಿಕಿತ್ಸೆಗೂ ದೇಹ ಸ್ಪಂದಿಸುವುದಿಲ್ಲ. ದೈಹಿಕ ನೋವು ತಾಳಲಾಗದೇ ಮನಸ್ಸಿಗೂ ಆಘಾತವಾಗಿರುತ್ತದೆ. ಜೀವನದ ಬಗ್ಗೆ ತೀವ್ರ ರೋಸಿ ಹೋಗಿರುತ್ತಾರೆ. ಅವರಲ್ಲಿ ಅನಾಥ ಭಾವ ಕಾಡುತ್ತಿರುತ್ತದೆ. ಇಂತಹ ವೇಳೆ ಅವರಿಗೆ ಕಾಳಜಿ, ಸಹಾನುಭೂತಿ ಅವಶ್ಯ. ಅಂಥವರು ಜೀವನದ ಕೊನೆಯ ಕ್ಷಣಗಳನ್ನೂ ಆನಂದದಿಂದ ಕಳೆಯಬೇಕು, ಸಾವಲ್ಲೂ ಘನತೆ ಕಾಣಬೇಕು ಎನ್ನುವುದೇ ಈ ಹಾಸ್ಪೈಸ್‌ನ ಆಶಯ.ಕಳೆದ 2023ರ ಏಪ್ರಿಲ್ 6ರಂದು ಆರಂಭಗೊಂಡ ಈ ಹಾಸ್ಪೈಸ್ ಕೇಂದ್ರದಲ್ಲಿ ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಚಿತ್ರದುರ್ಗ ಸೇರಿ ಸುತ್ತಮುತ್ತಲಿನ 15ಕ್ಕೂ ಅಧಿಕ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಗತ್ಯವಿರುವ ರೋಗಿಗಳಿಗೆ ಇಲ್ಲಿ ಉಚಿತವಾಗಿ ಸೇವೆ ನೀಡಲಾಗುತ್ತಿದೆ.
30 ಬೆಡ್‌ಗಳು: ಈ ಕೇಂದ್ರದಲ್ಲಿ ಒಟ್ಟು 30 ಬೆಡ್‌ಗಳ ವ್ಯವಸ್ಥೆಯಿದ್ದು, 10 ಬೆಡ್ ಮಹಿಳೆಯರಿಗೆ, 10 ಬೆಡ್ ಪುರುಷರಿಗಿದೆ. ಇನ್ನೂ 10 ವಿಶೇಷ ಬೆಡ್‌ಗಳಿದ್ದು, ಅವಶ್ಯಕತೆಯಿರುವವರಿಗೆ ಅತ್ಯಲ್ಪ ದರದಲ್ಲಿ ನೀಡಲಾಗುತ್ತಿದೆ. ಒಟ್ಟು 11 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಜತೆಗೆ ಇರುವವರಿಗೂ ತಂಗಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ರೋಗಿಗಳಿಗೆ ದಿನದ 24 ಗಂಟೆಗಳ ಕಾಲವೂ ಉಚಿತ ಸೇವೆ ನೀಡಲಾಗುತ್ತದೆ.
ಇಂದು ವಿಶ್ವ ಹಾಸ್ಪೈಸ್ ಪ್ಯಾಲಿಯೇಟರ್ ಕೇರ್ ದಿನಾಚರಣೆ: ಮಜೇಥಿಯಾ ಫೌಂಡೇಶನ್ ವತಿಯಿಂದ ಅ. 11ರಂದು ಬೆಳಗ್ಗೆ 11ಕ್ಕೆ ನವನಗರ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿರುವ ರಮಿಲಾ ಪ್ರಶಾಂತಿ ಮಂದಿರದಲ್ಲಿ ವಿಶ್ವ ಹಾಸ್ಪೈಸ್ ಪ್ಯಾಲಿಯೇಟರ್ ಕೇರ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ವಿಜಯಲಕ್ಷ್ಮೀ ದೇಶಮಾನೆ, ಕ್ಯಾನ್ಸರ್ ರೋಗ ತಜ್ಞ ಡಾ. ಬಿ.ಆರ್. ಪಾಟೀಲ ಪಾಲ್ಗೊಳ್ಳುವರು. ಫೌಂಡೇಶನ್ ಚೇರ್‌ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸುವರು.