ಹೋಂಸ್ಟೇಗಳಿಗೆ ಗೃಹ ಬಳಕೆ ವಿದ್ಯುತ್‌ ಶುಲ್ಕ ಕುರಿತು ಚರ್ಚೆ: ಶಾಸಕ ಭರವಸೆ

KannadaprabhaNewsNetwork |  
Published : Jun 14, 2024, 01:02 AM IST
ಚಿತ್ರ :  13ಎಂಡಿಕೆ2 : ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ಶುಲ್ಕ ಸಂಬಂಧ ಪ್ರವಾಸೋದ್ಯಮ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಹಾಗೂ ಆರು ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ಶುಲ್ಕ ಸಂಬಂಧ ಪ್ರವಾಸೋದ್ಯಮ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಹಾಗೂ ಆರು ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ಬಳಕೆ ಹಾಗೂ ಗೃಹ ಬಳಕೆ ವಿದ್ಯುತ್ ಶುಲ್ಕ ಸಂಬಂಧ ಒಂದೇ ರೀತಿಯ ವ್ಯಾಖ್ಯಾನ ಇರಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರ ಜೊತೆ ಚರ್ಚಿಸಲಾಗುವುದು ಎಂದರು.

ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಹರಿಸಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ಬಳಸಬಾರದು. ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ನೀಡಬೇಕು. ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

ಹೋಂ ಸ್ಟೇ ಅಸೋಷಿಯೇಷನ್‌ ಪ್ರತಿನಿಧಿಗಳು ಮಾತನಾಡಿ, ನೋಂದಾಯಿತ ಹೋಂಸ್ಟೇ ಅವರು ಮನೆಯಲ್ಲಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡುತ್ತಾರೆ. ಅದನ್ನು ಬಿಟ್ಟು ಹೊಟೇಲ್ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಆದ್ದರಿಂದ ಗೃಹ ಬಳಕೆಯಂತೆ ವಿದ್ಯುತ್‌ ನೀಡಬೇಕು ಎಂದು ಕೋರಿದರು.

ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ ಎಂಜಿನಿಯರ್‌ಗಳು ತಪಾಸಣೆ ಕೈಗೊಂಡು ವಾಣಿಜ್ಯ ಬಳಕೆಯಂತೆ ವಿದ್ಯುತ್ ದರ ನಿಗದಿ ಮಾಡುತ್ತಾರೆ. ಇದರಿಂದ ಹೋಂಸ್ಟೇ ನಡೆಸುವವರಿಗೆ ತುಂಬಾ ತೊಂದರೆಯಾಗಿದೆ ಎಂದು ಹೋಂಸ್ಟೇ ಪ್ರತಿನಿಧಿಗಳು ಶಾಸಕರ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಪ್ರವಾಸೋದ್ಯಮ ನೀತಿಯಡಿ ಹೋಂ ಸ್ಟೇ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿಯ ಎಂಜಿನಿಯರ್ ಅವರು ವಿದ್ಯುತ್ ನಿಗಮದಿಂದ ವಾಣಿಜ್ಯ ಮತ್ತು ಗೃಹ ಬಳಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಪಾಲಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿ ಮಾಡಲು ಸಹಕಾರಿಯಾಗಲಿದೆ ಎಂದು ಹೋಂಸ್ಟೇ ಅಸೋಷಿಯೇಷನ್ ಮಾಜಿ ಅಧ್ಯಕ್ಷ ಕರುಂಬಯ್ಯ ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಪವಿತ್ರ ದೇವಾಲಯಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಮತ್ತಷ್ಟು ಕ್ರಮವಹಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಕಡ್ಡಾಯ ಬರೆಸಬೇಕು. ಇದನ್ನು ಚಾಚೂ ತಪ್ಪದೇ ಪಾಲಿಸಬೇಕು. ಇದುವರೆಗೆ ಈ ರೀತಿ ನಾಮಫಲಕ ಬರೆಸದಿದ್ದಲ್ಲಿ ಶೀಘ್ರ ನಾಮಫಲಕಗಳನ್ನು ಬದಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹೋಂಸ್ಟೇ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಶುಲ್ಕ ಪಡೆಯಲಾಗುತ್ತಿದ್ದು, ಒಂದೇ ರೀತಿಯ ಶುಲ್ಕ ಪಾವತಿಸಿಕೊಳ್ಳಬೇಕು ಎಂದು ಮೋಂತಿ ಗಣೇಶ್ ಮನವಿ ಮಾಡಿದರು.

ಪ್ರಕ್ರಿಯಿಸಿದ ಜಿ.ಪಂ.ಸಿಇಒ ವರ್ಣಿತ್ ನೇಗಿ, ಗ್ರಾಮ ಪಂಚಾಯಿತಿ ಆಡಳಿತದಲ್ಲಿ ತಮ್ಮದೇ ಆದ ಸದಸ್ಯರನ್ನು ಹೊಂದಿರುವ ಸ್ಥಳೀಯ ಸಂಸ್ಥೆಯಾಗಿದ್ದು, ಸ್ಥಳೀಯ ಸಂಪನ್ಮೂಲ ಗಮನಿಸಿಕೊಂಡು ತೆರಿಗೆ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಜಿ.ಪಂ.ಮಧ್ಯ ಪ್ರವೇಶ ಮಾಡುವುದಿಲ್ಲ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್‌ ಅವರು, ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಹೋಂ ಸ್ಟೇ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಒಂದು ಮನೆಯಲ್ಲಿ 6-8 ಕೊಠಡಿಯಲ್ಲಿ ಹೋಂಸ್ಟೇ ನಡೆಸಬಹುದಾಗಿದೆ ಎಂದರು.

ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ ಮಾತನಾಡಿ, ಹೋಂಸ್ಟೇಗಳಲ್ಲಿ ಸಿಸಿಟಿವಿ ಇರಬೇಕು. ವಾಹನ ನಿಲುಗಡೆ ಜಾಗ ಇರಬೇಕು. ಹತ್ತಿರದವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಹೋಂಸ್ಟೇ ನಡೆಸುವ ಮಾಲೀಕರ ವಿರುದ್ದ ಪೊಲೀಸ್ ಇಲಾಖೆಯಲ್ಲಿ ಯಾವುದೇ ದೂರು ಇರಬಾರದು. ಅಂತವರಿಗೆ 10 ದಿನದೊಳಗೆ ಎನ್‌ಒಸಿ ನೀಡಲಾಗುತ್ತದೆ ಎಂದು ತಿಳಿಸಿದರು.

ಹೋಂಸ್ಟೇ ಅಸೋಷಿಯೇಷನ್‌ನ ಅಮರನಾಥ್ ಬಿ., ನಳಿನಿ ಅಚ್ಚಯ್ಯ, ಉಷಾ ಗಣಪತಿ, ಸಿ.ಸಿ.ತಿಮ್ಮಯ್ಯ, ಎನ್.ಕೆ.ಚಂಗಪ್ಪ, ಮಿಕ್ಕಿ ಕಾಳಪ್ಪ, ಕೆ.ಎಂ.ಕರುಂಬಯ್ಯ, ಎಂ.ಮೀನಾ ಕಾರ್ಯಪ್ಪ, ಪಿ.ಕೆ.ಹೆಮಾ ಮಾದಪ್ಪ, ಬಿ.ಎ.ಅಚ್ಚಯ್ಯ, ಸತೀಶ್ ರೈ, ಬಿ.ಪಿ.ಗಣಪತಿ, ಎ.ಎಸ್.ಮಲ್ಲೇಶ್ ಅವರು ಹಲವು ವಿಷಯ ಪ್ರಸ್ತಾಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ