ಗೋಪಾಲ್ ಯಡಗೆರೆ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಕ್ಯಾಬಿನೆಟ್ ನಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸ್ಥಾನ ಪಡೆಯುತ್ತಿದ್ದಂತೆ ರಾಜ್ಯದ ಅದರಲ್ಲಿಯೂ ಪ್ರಮುಖವಾಗಿ ಭದ್ರಾವತಿಯ ವಿಶ್ವೇಶ್ವರಯ್ಯ ಐರನ್ ಎಂಡ್ ಸ್ಟೀಲ್ ಕಂಪನಿ ಪುನರುಜ್ಜೀವನಗೊಳ್ಳುವ ಭರವಸೆಯ ಬೆಳಕು ಜಿಲ್ಲೆಯಲ್ಲಿ ಮೂಡಿದೆ. ಮುಖ್ಯವಾಗಿ ವಿಎಸ್ ಐಎಲ್ ಸಂಸ್ಥೆಯ ಸಾವಿರಾರು ಕಾರ್ಮಿಕರಲ್ಲಿ ಹೊಸ ಬೆಳಕು ಕಾಣಿಸಿದೆ. ಇದರ ಜೊತೆಗೆ ಇದರ ಪುನರುಜ್ಜೀವನದಿಂದ ಜಿಲ್ಲೆಯ ಆರ್ಥಿಕತೆ ಕೂಡ ಪುಟಿದೇಳಲಿದೆ ಎಂಬ ಅಭಿಪ್ರಾಯ ಮೂಡುತ್ತಿದೆ.
ವಿಐಎಸ್‌ಎಲ್ ಗೆ 101 ವರ್ಷವಾಗುತ್ತಿರುವ ಸಂಭ್ರಮಕ್ಕೆ ಸಾರ್ಥಕತೆಯ ಲೇಪ ದೊರೆಯಬಹುದೆಂಬ ಆಶಾವಾದವಿದೆ. ಹಲವು ದಶಕಗಳ ಹೋರಾಟದ ಬಳಿಕವೂ ಪುನರುಜ್ಜೀವನದ ಕನಸು ನನಸಾಗದ ಹೊತ್ತಿನಲ್ಲಿ ಈಗ ಇದೆಲ್ಲ ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗಿದೆ.ರಾಜ್ಯ ಸರ್ಕಾರದ ವಶದಲ್ಲಿದ್ದ ಕಾರ್ಖಾನೆಯನ್ನು 1989ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಗೆ ಹಸ್ತಾಂತರ ವಾದ ಬಳಿಕ ಏನೋ ಬದಲಾವಣೆಯಾಗಬಹುದೆಂಬ ಎಲ್ಲ ನಿರೀಕ್ಷೆಗಳೂ ತಲೆಕೆಳಗಾದ ಬಳಿಕ ಕಾರ್ಮಿಕರಲ್ಲಿ ಭಾರೀ ನಿರಾಶೆ ಮೂಡಿತ್ತು. ಬೆನ್ನಲ್ಲೇ ಕಳೆದ ದಶಕ ದಿಂದೀಚೆಗೆ ಹಲವು ರೀತಿಯ ಹೋರಾಟಗಳೂ ನಡೆದವು. ಸಂಸದ ಬಿ.ವೈ.ರಾಘವೇಂದ್ರ ಅವರ ಎಲ್ಲ ರೀತಿಯ ಪ್ರಯತ್ನಗಳ ನಡುವೆಯೂ ಕೇಂದ್ರ ಸರ್ಕಾರ ಪುನರುಜ್ಜೀವನದ ಬದಲಿಗೆ ಇದನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಯಿತು. ಆದರೆ ಕೇಂದ್ರ ಸರ್ಕಾರದ ದುರದೃಷ್ಟವೋ ಏನೋ ಯಾರೂ ಕೂಡ ಇದಕ್ಕೆ ಬಿಡ್ ಮಾಡಲು ಮುಂದೆ ಬರಲೇ ಇಲ್ಲ.
ಪುನಶ್ಚೇತನ:
ಹೆಚ್.ಡಿ.ಕುಮಾರಸ್ವಾಮಿಯವರು ಈ ವಿಷಯದಲ್ಲಿ ಗಟ್ಟಿಯಾದ ನಿಲುವು ತೋರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ಸಂಸದ ಬಿ. ವೈ.ರಾಘವೇಂದ್ರ ಕೂಡ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಲಿಷ್ಠವಾಗಿದೆ. ವಿಐಎಸ್‌ಎಲ್ ಪುನರುಜ್ಜೀವನದ ಮೂಲಕ ರಾಜಕೀಯವಾಗಿ ಇಲ್ಲಿ ಬಲಿಷ್ಠವಾಗಲು ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಇದುವರೆಗೆ ಯಶಸ್ವಿಯಾಗಿಲ್ಲ. ಈ ಬಾರಿ ಕುಮಾರಸ್ವಾಮಿ ಉಕ್ಕು ಸಚಿವರಾಗಿದ್ದು, ಅವರು ಈ ಕಂಪನಿಯನ್ನು ಪುನರುಜ್ಜೀವನ ಗೊಳಿಸಿದರೆ ಸಹಜವಾಗಿಯೇ ಜೆಡಿಎಸ್ ಇದರ ಲಾಭ ಪಡೆಯಲು ಯತ್ನಿಸಲಿದೆ.
ಕಾರ್ಖಾನೆಯ ಇತಿಹಾಸ:
ಆರಂಭದಲ್ಲಿ ಅದಿರು ಕರಗಿಸಲು ಮರಗಳನ್ನು ಬಳಸಲಾಗುತ್ತಿತ್ತು. ಈ ಮರದ ದಿಮ್ಮೆಗಳನ್ನು ತಾಳಗುಪ್ಪ ಅರಣ್ಯ ಪ್ರದೇಶದಿಂದ ಸಾಗಿಸಲು 1939ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗವನ್ನು ಹಾಕಲಾಯಿತು. 1952ರಲ್ಲಿ ಕಂಪನಿಯಲ್ಲಿ ಎರಡು ಎಲೆಕ್ಟ್ರಿಕ್ ಪಿಗ್-ಕಬ್ಬಿಣದ ಮೇಲ್ಮೈಗಳನ್ನು ಸ್ಥಾಪಿಸಲಾಯಿತು, ಇದರಿಂದಾಗಿ VISL ಅನ್ನು ಕಬ್ಬಿಣದ ಅದಿರು ಕರಗಿಸಲು ವಿದ್ಯುಚ್ಛಕ್ತಿಯನ್ನು ಬಳಸಿದ ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯಾಗಿ ಹೆಸರು ಪಡೆಯಿತು. 1962ರಲ್ಲಿ ಈ ಕಾರ್ಖಾನೆಯ ಹೆಸರನ್ನು ದಿ ಮೈಸೂರು ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು
ಹೆಚ್.ಡಿ.ದೇವೇಗೌಡರ ಅವಧಿಯಲ್ಲಿ ರಾಜ್ಯ ಸರ್ಕಾರವು ಸಾಂಕೇತಿಕವಾಗಿಒಂದು ರುಪಾಯಿಗೆ ಸರ್ಕಾರಿ ಸ್ವಾಮ್ಯದ VISL ಅನ್ನು SAILಗೆ ವರ್ಗಾಯಿಸಿತು. ಅಂದಿನಿಂದ ಇದು SAILನ ಭಾಗವಾಯಿತು.