ಶಾಸಕ ಮುನಿರತ್ನ ಮಾತನಾಡಿರುವ ಆಡಿಯೋ ಫೇಕ್ ಎಂಬ ಚರ್ಚೆ : ಶಿವಮೊಗ್ಗ ಸಂಸದ ರಾಘವೇಂದ್ರ

KannadaprabhaNewsNetwork | Updated : Sep 16 2024, 01:24 PM IST

ಸಾರಾಂಶ

ಚಿಕ್ಕಮಗಳೂರು, ಶಾಸಕ ಮುನಿರತ್ನ ಅವರು ಒಂದು ವರ್ಗದ ಬಗ್ಗೆ ಮಾತನಾಡಿದ್ದಾರೆ ಎಂಬ ಆಡಿಯೋ ನಕಲಿ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಒಂದು ವೇಳೆ ಒಂದು ವರ್ಗಕ್ಕೆ ನೋವಾಗುವಂತೆ ಮುನಿರತ್ನ ಅವರು ಮಾತನಾಡಿದ್ದರೆ ಅದು ತಪ್ಪು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

 ಚಿಕ್ಕಮಗಳೂರು :  ಶಾಸಕ ಮುನಿರತ್ನ ಅವರು ಒಂದು ವರ್ಗದ ಬಗ್ಗೆ ಮಾತನಾಡಿದ್ದಾರೆ ಎಂಬ ಆಡಿಯೋ ನಕಲಿ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಒಂದು ವೇಳೆ ಒಂದು ವರ್ಗಕ್ಕೆ ನೋವಾಗುವಂತೆ ಮುನಿರತ್ನ ಅವರು ಮಾತನಾಡಿದ್ದರೆ ಅದು ತಪ್ಪು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಉದ್ದೇಶದಿಂದ ಮುನಿರತ್ನ ಅವರನ್ನು ಬಂಧಿಸಿದ್ದರೆ ಅದೂ ತಪ್ಪು. ಅಧಿಕಾರ ಇದೆ ಎಂದು ಸರ್ಕಾರ ದರ್ಪ ತೋರಿಕೊಂಡು ಶಾಸಕ, ಮಾಜಿ ಸಚಿವರನ್ನು ಬಂಧಿಸಿರುವುದು ತಪ್ಪು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಒಂದೇ ವರ್ಷದಲ್ಲಿ ಜನ ಬೇಸತ್ತು ಹೋಗಿದ್ದಾರೆ. ಪ್ರತಿ ದಿನ ಒಂದಿಲ್ಲೊಂದು ಹಗರಣಗಳು ನಡೆಯುತ್ತಿವೆ. ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದಿದ್ದು, ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಹೀಗಾಗಿ ಸಿಎಂ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಶಿವಮೊಗ್ಗದ ಅಧಿಕಾರಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದುವರೆಗೆ ಅವರ ಕುಟುಂಬಕ್ಕೆ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಬದಲಿಗೆ ಎಸ್‌ಐಟಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೋಮು ಸೌಹಾರ್ದತೆ ಕದಡುವವರಿಗೆ ಶಕ್ತಿ ಬಂದಂತಾಗಿದೆ. ನಾಗಮಂಗಲ ಘಟನೆ ಯನ್ನು ಗೃಹ ಸಚಿವರು ಚಿಕ್ಕ ಘಟನೆ ಎಂದು ಹೇಳುತ್ತಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಜೊತೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದು ಚಿಕ್ಕ ಘಟನೆಯೇ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗ ಭಾರತಕ್ಕೆ ಶಾಪ ಹಾಕುವವರನ್ನೇ ಭೇಟಿ ಮಾಡುತ್ತಾರೆ. ಅಮೆರಿಕಾದಲ್ಲಿ ಮೀಸಲಾತಿ ರದ್ದು ಪಡಿಸುವುದಾಗಿ ಹೇಳಿದ್ದರು. ರಾಹುಲ್ ಗಾಂಧಿ ಅಜ್ಜ ನೆಹರು ಅವರು 1954ರಲ್ಲಿ ಜಾರಿಗೆ ಬಂದ ಮೀಸಲಾತಿ ವಿರೋಧಿಸಿದ್ದರು. ತಂದೆ ರಾಜೀವ್ ಗಾಂಧಿ ಮಂಡಲ್ ವರದಿಯನ್ನು ವಿರೋಧಿಸಿದ್ದರು. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this article