ಕನ್ನಡಪ್ರಭ ವಾರ್ತೆ ಚಿಂಚೋಳಿಮೋದಿ ನೇತೃತ್ವ ಕೇಂದ್ರ ಸರಕಾರದ ಆರ್ಥಿಕ ತಪ್ಪು ನೀತಿಯಿಂದಾಗಿ ದೇಶದ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ಯುಪಿಎ ಸರ್ಕಾರದ ಆಡಳಿತದಲ್ಲಿ ₹೫೪ ಲಕ್ಷ ಕೋಟಿ ಸಾಲದ ಹೊರೆ ಇದ್ದರೆ, ಇದೀಗ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ₹೧೬೦ ಲಕ್ಷ ಕೋಟಿ ಸಾಲ ಮಾಡಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.ತಾಲೂಕಿನ ಹೊಡೇಬೀರನಳ್ಳಿ, ಕೆರೋಳಿ, ಗರಗಪಳ್ಳಿ, ಕರ್ಚಖೇಡ, ಭಕ್ತಂಪಳ್ಳಿ ಗ್ರಾಮಗಳಲ್ಲಿ ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಟ ದೊಡ್ಡಮನಿ ಅವರ ಪರವಾಗಿ ಪಾದಯಾತ್ರೆ ನಡೆಸಿದ ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಕೆರೋಳಿ ಗ್ರಾಮದಲ್ಲಿ ಮಾತನಾಡಿದರು.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ವಿಶೇಷ ಸ್ಥಾನಮಾನ ನೀಡುವುದಕ್ಕಾಗಿ ಸಂವಿಧಾನ ೩೭೧ನೇ(ಜೆ) ಕಲಂ ಜಾರಿಗೊಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರಿಂದ ನಮ್ಮ ಭಾಗದ ಬಡವರ ಮಕ್ಕಳಿಗೆ ಉದ್ಯೋಗ, ಶಿಕ್ಷಣ, ಸರ್ಕಾರಿ ನೇಮಕಾತಿಯಲ್ಲಿ ಮತ್ತು ಮೆಡಿಕಲ್, ಇಂಜನಿಯರಿಂಗ್ ಸೀಟ್‌ಗಳು ಸಿಗುತ್ತಿವೆ. ಆದರೆ ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ಕಳೆದ ನಾಲ್ಕು ವರ್ಷಗಳಲ್ಲಿ ಏನು ಮಾಡಿಲ್ಲ. ಖರ್ಗೆಯವರು ಮಂಜೂರಿಗೊಳಿಸಿದ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಮರಳಿ ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರದಲ್ಲಿ ಗುಜರಾತ ರಾಜ್ಯದ ಐಎಎಸ್ ಅಧಿಕಾರಿಗಳು ಅಧಿಕಾರ ನಡೆಸುತ್ತಿದ್ದಾರೆ. ಮೋದಿಗೆ ರೈತರ ಬದುಕು ಗೊತ್ತಾಗುತ್ತಿಲ್ಲ. ಕೇಂದ್ರ ಸರ್ಕಾರವು ಐಟಿ, ತೆರಿಗೆ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ದೇಶದ ವಿರೋಧ ಪಕ್ಷದವರಿಗೆ ಭ್ರಷ್ಟಾಚಾರ ಮಾಡಲಾಗುತ್ತಿದೆ ಎಂದು ಹೆದರಿಸಿ ಈಡಿ ಮತ್ತು ತೆರಿಗೆ ಸಿಬಿಐ ದಾಳಿ ನಡೆಸಲಾಗುತ್ತದೆ. ಆದರೆ ಅಶೋಕ ಚವ್ಹಾಣ, ಅಜೀತಪವಾರ, ನಿತೀಶಕುಮಾರ ಬಿಜೆಪಿ ಸೇರಿದ ಅವರ ಮೇಲೆ ಯಾವುದೇ ತನಿಖೆ ನಡೆಸುವುದನ್ನು ನಿಲ್ಲಿಸಲಾಗುತ್ತದೆ. ಬಿಜೆಪಿ ಅಭ್ಯರ್ಥಿಗಳು ಕೇವಲ ಮೋದಿ ನೋಡಿ ಮತ ಹಾಕಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಸಂಸದ ಡಾ. ಉಮೇಶ ಜಾಧವ್ ಅವರ ಅಭಿವೃದ್ಧಿ ಸಾಧನೆ ಶೂನ್ಯವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೇಡಂ, ಅಫಜಲ್ಪುರ, ಜೇವರ್ಗಿ, ಚಿತ್ತಾಪೂರ ಎಲ್ಲೂ ಚುನಾವಣಾ ಪ್ರಚಾರಕ್ಕೆ ಹೋಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಅವರನ್ನು ವಿರೋಧಿಸಿದ್ದರು. ಆದರೆ ಇಗ ಯಾವುದೇ ತಾಲೂಕಿನಲ್ಲಿ ಮತ ಕೇಳಲು ಅವರು ಮುಖವನ್ನು ತೋರಿಸಲು ಆಗುತ್ತಿಲ್ಲ ಹಾಗಾಗಿ ಕೇವಲ ಮೋದಿ ಹೆಸರಿನ ಮೇಲೆ ಮತ ಯಾಚಿಸುತ್ತಿರುವುದು ನಾಚಿಕೇಡು ಸಂಗತಿ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಸರಕಾರವು ರಾಜ್ಯದ ಜನರಿಗೆ ಗೃಹಲಕ್ಷ್ಮಿ, ಉಚಿತ ವಿದ್ಯುತ್, ಗೃಹಲಕ್ಷ್ಮಿ, ಉಚಿತ ಅಕ್ಕಿ, ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದಾರೆ. ಕಲಬುರಗಿಯಿಂದ ೨೦೦೯, ೨೦೧೪ರಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ ನಂತರ ಸಾಕಷ್ಟು ಅಭವೃದ್ಧಿ ಕೆಲಸಗಳಾಗಿವೆ. ಇ.ಎಸ್.ಐ ಆಸ್ಪತ್ರೆ, ಜಯದೇವ ಹೃದಯ ಆಸ್ಪತ್ರೆ. ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ, ಜೀಮ್ಸ್ ಆಸ್ಪತ್ರೆಗಳಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿವೆ. ಬಿಜೆಪಿ ಸಂಸದ ಡಾ. ಉಮೇಶ ಜಾಧವ್ ಕಲಬುರಗಿ ಸಂಸದರು ಆಗದೇ ಕೇವಲ ಚಿಂಚೋಳಿ ಸಂಸದರಾಗಿದ್ದರು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಟೀಕಿಸಿದರು.ಕಾಂಗ್ರೆಸ ಪಕ್ಷವು ಬಡವರ ಪಕ್ಷವಾಗಿದೆ.ಅವರ ಬಗ್ಗೆ ಕಾಳಜಿ ಹೊಂದಿದೆ ಆದರೆ ಬಿಜೆಪಿ ರೈತರ ಬಡವರಿಗಾಗಿ ಏನು ಮಾಡಿಲ್ಲ ಕಲಬುರಗಿ ಕಾಂಗ್ರೆಸ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಬೆಂಬಲಿಸಬೇಕೆಂದು ಮನವಿ ಸಚಿವರು ಮಾಡಿದರು.
ಕಾಂಗ್ರೆಸ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ ಪಕ್ಷವು ಅಧಿಕಾರಕ್ಕೆ ಬರಬೇಕು ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿ ಸಾಧನೆ ಮೇಲೆ ನನಗೆ ಜನರ ಬೆಂಬಲ ಸಿಗುತ್ತಿದೆ ಎಂದರು.ಭೀಮರಾವ ಟಿ.ಟಿ. ಸತೀಶರೆಡ್ಡಿ ರಂಜೋಳ, ರವಿಸ್ವಾಮಿ, ಸಂತೋಷ ಗುತ್ತೆದಾರ, ಅಶೋಕರೆಡ್ಡಿ, ಮಸೂದ, ಧೂಳಪ್ಪ ಬೀರನಳ್ಳಿ, ಅಜೀತ ಪಾಟೀಲ, ಬಸವರಾಜ ಪಾಟೀಲ ಊಡಗಿ, ಬಸವರಾಜ ಕೆರೋಳಿ, ರೇವಣಸಿದ್ದ ಅಣಕಲ, ಲಿಂಗಶೆಟ್ಟಿ ತಟ್ಟೆಪಳ್ಳಿ, ಸುರೇಶ ಪಾಟೀಲ ರಾಯಕೋಡ, ನಾಸೀರ ಮದರಗಿ, ಬಸವರಾಜ ಸಜ್ಜನಶೆಟ್ಟಿ, ಕಲ್ಲಾರೆಡ್ಡಿ ಬೀರನಳ್ಳಿ, ಆನಂದ ಟೈಗರ ಇನ್ನಿತರಿದ್ದರು.