ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಾಲಬಾಧೆಯಿಂದ ಕೃಷಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ಮಲ್ಲಾಜೀರ ಗಣಪತಿ ಅವರ ಪುತ್ರ ಸತೀಶ್ (42) ಮೃತರು.ಅವರು ಮಂಗಳವಾರ ಸಂಜೆ ಮನೆ ಸಮೀಪದ ಕಾಫಿ ತೋಟದಲ್ಲಿ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಮೃತಪಟ್ಟರು. ಪಟ್ಟಣದ ರಾಜ್‍ಮಹಲ್ ವಾಣಿಜ್ಯ ಸಂಕೀರ್ಣದಲ್ಲಿ ಕೃಷಿ ಸಂಬಂಧಿತ ಪರಿಕರಗಳ ಮಾರಾಟ ಅಂಗಡಿ ನಡೆಸುತ್ತಿದ್ದ ಸತೀಶ್, ಅತಿಯಾದ ಸಾಲ ಹೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.
ಸತೀಶ್ ಪೋಷಕರೊಂದಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.ಚೆಕ್ ಬೌನ್ಸ್ ಪ್ರಕರಣ-ಆರೋಪಿಗೆ 6 ತಿಂಗಳು ಸಜೆ, ದಂಡ:
ಚೆಕ್ ಬೌನ್ಸ್ ಪ್ರಕರಣದಲ್ಲಿ ವಿರಾಜಪೇಟೆ ನಿವಾಸಿಗೆ ವಿರಾಜಪೇಟೆ ನ್ಯಾಯಾಲಯ ಆರು ತಿಂಗಳು ಸಜೆ ಹಾಗೂ ದಂಡ ಶಿಕ್ಷೆ ವಿಧಿಸಿದೆ.ವಿರಾಜಪೇಟೆ ನಿಸರ್ಗ ಲೇಔಟ್ ನಿವಾಸಿ ಟಿಆರ್ ರಿನಿಶ್ ಎಂಬವರು ವಿ.ಆರ್. ಫೈನಾನ್ಸ್ ಅವರಿಂದ ೨.೫೦ ಲಕ್ಷ ರು. ಸಾಲ ಪಡೆದು ಹಿಂತಿರುಗಿಸದೆ ಹಣದ ಬಾಬ್ತು ಚೆಕ್ ನೀಡಿದ್ದರು. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಪ್ರಕರಣ ವಿರಾಜಪೇಟೆ ನ್ಯಾಯಾಲಯದಲ್ಲಿ ದಾಖಲಾಗಿತ್ತು.೨೦೧೮ ರಲ್ಲಿ ವಿ.ಆರ್. ಫೈನಾನ್ಸ್ ಅವರಿಂದ ೨.೫೦ ಲಕ್ಷ ಹಣ ಸಾಲ ಪಡೆದು ಚೆಕ್ ನೀಡಿದ್ದು ಫೈನಾನ್ಸ್ ಅವರು ಬ್ಯಾಂಕಿಗೆ ಚೆಕ್ ಸಲ್ಲಿಸಿದಾಗ ಚೆಕ್ ಅಮಾನ್ಯಗೊಂಡಿತ್ತು. ನಂತರ ವಕೀಲರ ಮೂಲಕ ನೋಟೀಸ್ ನೀಡಿ ಹಣ ಪಾವತಿಸದ ಕಾರಣ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ನ್ಯಾಯಾಧೀಶ ಸಂತೋಷ್ ಕೊಠಾರಿ ಆರು ತಿಂಗಳು ಜೈಲು ಶಿಕ್ಷೆ ಹಾಗೂ, ರು. ೩.೩೫ ಲಕ್ಷ ಹಣವನ್ನು ಫೈನಾನ್ಸಿಗೆ ಪಾವತಿಸುವಂತೆ ಆದೇಶ ನೀಡಿದ್ದಾರೆ..ವಿ.ಆರ್.ಪೈನಾನ್ಸ್ ಪರವಾಗಿ ವಕೀಲ ಡಿ.ಸಿ. ಧ್ರುವ ವಾದಿಸಿದ್ದರು.