ಋಣ ಸಂದಾಯದ ಕೇಂದ್ರ ಬಜೆಟ್: ಧರ್ಮಜ ಉತ್ತಪ್ಪ ಟೀಕೆ

KannadaprabhaNewsNetwork | Published : Jul 24, 2024 12:21 AM

ಸಾರಾಂಶ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದು ಇದು ದೇಶದ ಬಜೆಟ್ ಅಲ್ಲ. ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದು ಇದು ದೇಶದ ಬಜೆಟ್ ಅಲ್ಲ. ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಟೀಕಿಸಿದ್ದಾರೆ.

ಬಿಹಾರ ಮತ್ತು ಆಂಧ್ರಪ್ರದೇಶದ ಜೆಡಿಯು ಹಾಗೂ ಟಿಡಿಪಿ ಎನ್‌ಡಿಎ ಸರ್ಕಾರಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಋಣ ತೀರಿಸಲು 140 ಕೋಟಿ ಜನತೆಯ ತೆರಿಗೆ ಹಣ ಬಳಕೆ ಮಾಡಿದ್ದಾರೆ ಎಂದು ಟೀಕಿಸಿರುವ ಧರ್ಮಜಾ ಉತ್ತಪ್ಪ, ಕರ್ನಾಟಕ ರಾಜ್ಯವನ್ನು ಮೋದಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

26 ಸಾವಿರ ಕೋಟಿ ರು. ಬಿಹಾರ ರಾಜ್ಯಕ್ಕೆ , 15 ಸಾವಿರ ಕೋಟಿ ರು. ಆಂಧ್ರಪ್ರದೇಶ ರಾಜ್ಯಕ್ಕೆ ನೀಡಿ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ.

ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವನ್ನೂ ಸಮಾನವಾಗಿ ಕಾಣವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಕಡೆಗಣಿಸಿರುವುದು ಸ್ಪಷ್ಟವಾಗಿದೆ. ಪ್ರತಿ ಬಾರಿ ಅತಿ ಹೆಚ್ಚಿನ ಲೋಕಸಭಾ ಸದಸ್ಯರನ್ನು ಬಿಜೆಪಿಯಿಂದ ಆರಿಸಿ ಕರ್ನಾಟಕ ಜನತೆ ಕಳುಹಿಸುತ್ತಿದ್ದರೂ ಕರ್ನಾಟಕಕ್ಕೆ ಎನ್.ಡಿ.ಎ ಸರ್ಕಾರ ಅನ್ಯಾಯ ಮಾಡುತ್ತಿರುವುದು ಕಾಣಿಸುತ್ತಿದೆ. ಕರ್ನಾಟಕ ಅತಿವೃಷ್ಟಿಯಿಂದ ತತ್ತರಿಸುತ್ತಿರುವ ಸಂಧರ್ಭದಲ್ಲಿ ವಿಶೇಷ ಪ್ಯಾಕೆಜ್ ನಿರೀಕ್ಷೆ ಮಾಡಲಾಗಿತ್ತು. ಆದರೆ ರಾಜ್ಯದ ಜನತೆಯ ಮೇಲಿನ ಆಕ್ರೋಶವೋ ಅಥವಾ ರಾಜ್ಯ ಸರ್ಕಾರದ ಮೇಲಿನ ಆಕ್ರೋಶವೋ ಗೊತ್ತಿಲ್ಲ. ಪ್ರತಿ ಬಾರಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಜಿಎಸ್‌ಟಿ ಹಂಚಿಕೆಯಲ್ಲಿಯೂ ರಾಜ್ಯದ ಪಾಲಿನ ಹಣ ಕಡಿತಗೊಳಿಸಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂದು ಧರ್ಮಜ ಬೇಸರ ವ್ಯಕ್ತಪಡಿಸಿದ್ದಾರೆ.

Share this article