ಜುಲೈ 26 ರಂದು ಚಾಮರಾಜಜನಗರದಲ್ಲಿ ಬಿಎಸ್ಪಿಯಿಂದ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Jul 24, 2024 12:21 AM

ಸಾರಾಂಶ

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಮೀಸಲು ಅನುದಾನವನ್ನು ಅನ್ಯ ಉದ್ದೇಶಗಳಿಗೆ ರಾಜ್ಯ ಸರ್ಕಾರ ಬಳಸಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಜು.26 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಮೀಸಲು ಅನುದಾನವನ್ನು ಅನ್ಯ ಉದ್ದೇಶಗಳಿಗೆ ರಾಜ್ಯ ಸರ್ಕಾರ ಬಳಸಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಜು.26 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಚಾಮರಾಜೇಶ್ವರ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕರಪತ್ರ ಹಂಚಿಕೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಹಣವನ್ನು 2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ 25,390 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್ಸಿ, ಎಸ್ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ದಲಿತರ ಮತಗಳನ್ನು ಪಡೆದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯವಾಗಿ ಅಲ್ಲದೇ ಆರ್ಥಿಕವಾಗಿಯೂ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಜಾರಿಯಾದಾಗಿನಿಂದ ಇದುವರೆಗೆ 2.56 ಲಕ್ಷ ಕೋಟಿಯನ್ನು ಈ ಯೋಜನೆಗೆ ಒದಗಿಸಲಾಗಿದ್ದು, ಶೇ.10 ರಷ್ಟು ಹಣ ಎಸ್ಸಿ, ಎಸ್ಟಿಗೆ ತಲುಪಿಲ್ಲ, ಸುಮಾರು 70 ಸಾವಿರ ಕೋಟಿ ದುರ್ಬಳಕೆಯಾಗಿದೆ ಎಂದರು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅನುದಾನದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪಿಎಚ್‌ಡಿ ತನಕ ಉಚಿತ ಶಿಕ್ಷಣ ನೀಡಬಹುದಿತ್ತು. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ಅಲ್ಲದೇ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು, ಸ್ವಂತ ಮನೆ ನಿರ್ಮಾಣ, ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಮೆರಿಟ್‌ ವಿದ್ಯಾರ್ಥಿವೇತನ ರದ್ದು ಮಾಡಿದ್ದು, ವಿದೇಶದಲ್ಲಿ ಓದಲು ರೂಪಿಸಿದ್ದ ಪ್ರಬುದ್ಧ ಯೋಜನೆ ನಿಲ್ಲಿಸಿದೆ, ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಪೂರ್ಣ ಶುಲ್ಕ ಪಾವತಿಸುವಂತೆ ಮಾಡಲಾಗಿದೆ, ಎರಡು ವರ್ಷದಿಂದ ವಿದ್ಯಾರ್ಥಿವೇತನ ನೀಡುತ್ತಿಲ್ಲ, ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಓದುತಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್‌ ಪ್ರವೇಶ ರದ್ದುಗೊಳಿಸಲಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಸಾವಿರಾರು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ, ಖಾಸಗಿ ವಲಯದಲ್ಲಿ ಮೀಸಲಾತಿ ನೀಡುತ್ತಿಲ್ಲ. ಎಸ್ಟಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಹಣ ದುರ್ಬಳಕೆ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ದುರಂತ. ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ ಮಂತ್ರಿಯಾಗಿದ್ದಾಗ ಎಸ್ಸಿ, ಎಸ್ಪಿಯ 19 ಸಾವಿರ ಕೋಟಿ ಹಣ ದುರ್ಬಳಕೆ ಆಗಿತ್ತು. ಬಿಜೆಪಿ, ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಅಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಮೂರ್ತಿ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಸಂಯೋಜಕ ಪ್ರಕಾಶ್, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಮುಖಂಡ ದೊಡ್ಡರಾಯಪೇಟೆ ಕೃಷ್ಣಮೂರ್ತಿ ಇದ್ದರು.

Share this article