ಪ್ರವಾಹ: 35 ಗ್ರಾಮ ಪಂಚಾಯಿತಿಯಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ

KannadaprabhaNewsNetwork |  
Published : Jul 24, 2024, 12:21 AM IST
23ಡಿಡಬ್ಲೂಡಿ11ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ. | Kannada Prabha

ಸಾರಾಂಶ

ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಪ್ರವಾಹ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಆದರೆ ತಕ್ಷಣ ಸ್ಪಂದಿಸಲು ರಕ್ಷಣಾ ತಂಡ ಸಿದ್ಧವಾಗಿರಬೇಕು. ಈ ಹಿನ್ನಲೆಯಲ್ಲಿ ನವಲಗುಂದ ಪಟ್ಟಣದಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ತಾತ್ಕಾಲಿಕವಾದ ಅಗ್ನಿಶಾಮಕ ಠಾಣೆ ತೆರೆಯಲು ಸೂಚಿಸಲಾಗಿದೆ.

ಧಾರವಾಡ:

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟು ಮಾಡುವ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳ ತೀರದ 35 ಗ್ರಾಮ ಪಂಚಾಯಿತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದೆ. ಸಮಿತಿಗಳು ವಿಪತ್ತು ನಿರ್ವಹಣೆಗೆ ಸ್ಥಳೀಯವಾಗಿ ಸಹಕಾರ ನೀಡಲಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಪ್ರವಾಹ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಆದರೆ ತಕ್ಷಣ ಸ್ಪಂದಿಸಲು ರಕ್ಷಣಾ ತಂಡ ಸಿದ್ಧವಾಗಿರಬೇಕು. ಈ ಹಿನ್ನಲೆಯಲ್ಲಿ ನವಲಗುಂದ ಪಟ್ಟಣದಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ತಾತ್ಕಾಲಿಕವಾದ ಅಗ್ನಿಶಾಮಕ ಠಾಣೆ ತೆರೆಯುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ ನಿರ್ದೇಶನ ನೀಡಿದರು.

ಪ್ರಸಕ್ತ ಮುಂಗಾರಿನ ಮಳೆಗೆ ಈ ವರೆಗೆ ಜಿಲ್ಲೆಯಲ್ಲಿ ಏಳು ಮನೆಗಳಿಗೆ ತೀವ್ರ ಹಾನಿ ಮತ್ತು 120 ಮನೆಗಳಿಗೆ ಭಾಗಶಃ ಹಾನಿ ಆಗಿದ್ದು, ಒಟ್ಟು 127 ಮನೆಗಳಿಗೆ ಹಾನಿ ಆಗಿದೆ. ಹಾನಿಯಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಗಳನ್ವಯ ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದ್ದು, ತಹಸೀಲ್ದಾರ್‌ ನಿರ್ದೇಶನದಲ್ಲಿ ಕಂದಾಯ ಹಾಗೂ ಎಂಜಿನಿಯರಿಂಗ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆಯಾ ತಾಲೂಕಿನ ತಹಸೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಸೋರಿಕೆ, ಶೀಥಿಲತೆ ಗಮನಿಸಬೇಕು. ತೊಂದರೆ ಕಂಡುಬಂದಲ್ಲಿ ಅವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಡೆಂಘೀ ಡೇ:

ಸರ್ಕಾರದ ನಿರ್ದೇಶನದಂತೆ ಪ್ರತಿ ಶುಕ್ರವಾರ ಜಿಲ್ಲೆಯಾದ್ಯಂತ ವಾರ್ತಾ ನಿರ್ಮೂಲನೆ ದಿನ ಆಚರಿಸಲಾಗುತ್ತದೆ. ಅದರಂತೆ ಪ್ರತಿ ಶನಿವಾರ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಡೆಂಘೀ ಜಾಗೃತಿ ಹಾಗೂ ಶಾಲಾ ಸ್ವಚ್ಛತಾ ದಿನ ಆಚರಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌, ಇಒ ಮತ್ತು ಟಿಎಚ್‌ಒ ಭಾಗವಹಿಸಬೇಕು. ಗ್ರಾಮಮಟ್ಟದಲ್ಲಿ ಅಲ್ಲಿನ ಕಂದಾಯ, ಪಂಚಾಯತ್‌ರಾಜ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮಗಳ ಜಿಪಿಎಸ್ ಫೋಟೊಗಳನ್ನು ಪೂರೈಸಬೇಕೆಂದರು. ಜತೆಗೆ ಡೆಂಘೀ ಖಚಿತವಾಗಿರುವ ಮತ್ತು ಹಾಟ್‌ಸ್ಪಾಟಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಬೇವಿನ ಎಣ್ಣೆ ವಿತರಿಸಲು ಕ್ರಮಕೈಗೊಳ್ಳಲು ಡಿಸಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ