ಪ್ಯಾನಿಕ್ ಬಟನ್, ಜಿಪಿಎಸ್ ಆದೇಶ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 24, 2024 12:21 AM

ಸಾರಾಂಶ

ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ ವ್ಯವಸ್ಥೆ ಹಾಗೂ ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿಚಾಲಕರ ಸಂಘದ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಾವೇರಿ: ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ ವ್ಯವಸ್ಥೆ ಹಾಗೂ ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿಚಾಲಕರ ಸಂಘದ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು.ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಕ್ಸಿ ವ್ಯವಸ್ಥೆಯನ್ನು ದಿನದಿಂದ ದಿನಕ್ಕೆ ಸರ್ಕಾರಗಳು ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆ ಹೆಸರಿನಲ್ಲಿ ಹೊರೆಯಾಗಿಸುತ್ತಿದೆ. ಇದು ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಆದಾಯವಿಲ್ಲದೇ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಜೀವನ ನಡೆಸುವುದೇ ಕಷ್ಟವಾಗಿದೆ. ಕೇವಲ ಟ್ಯಾಕ್ಸಿ ನಂಬಿಕೊಂಡು ಚಾಲಕರು ಮತ್ತು ಮಾಲಕರುತಮ್ಮ ಕುಟುಂಬಗಳನ್ನು ಸಲುಹುತ್ತಿವೆ. ಕೂಡಲೇ ಅವೈಜ್ಞಾನಿಕ ವ್ಯವಸ್ಥೆ ಎನಿಸಿರುವ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಎಂದು ಆಗ್ರಹಿಸಿದರು.ಕೊರೋನಾ ನಂತದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಸ್ಥಿತಿ ವ್ಯಾವಹಾರಿಕವಾಗಿ, ಆರ್ಥಿಕವಾಗಿ ಗಂಭೀರವಾಗಿದೆ. ಅಲ್ಲದೇ ಈಗಾಗಲೇ ಒಂದು ವರ್ಷದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಟ್ಯಾಕ್ಸಿಗಳ ಬಳಕೆ ಶೇ.೯೦ರಷ್ಟು ಕುಂಠಿತಗೊಂಡಿದೆ. ಕೂಡಲೇ ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಕುಟುಂಬ ನಿರ್ವಹಣೆಗೆ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು. ಈ ಮೂಲಕ ಆರ್ಥಿಕತೆ ಸುಧಾರಣೆಗೆ ಕ್ರಮಗಳು ತುರ್ತಾಗಿ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ದಿನದಿಂದ ದಿನಕ್ಕೆ ಡಿಸೇಲ್, ಪೆಟ್ರೋಲ್, ಸಿಎನ್‌ಜಿಗಳ ದರ ಏರಿಕೆಯಾಗುತ್ತಿದೆ.ಇನ್ನು ಎಸ್‌ಎಸ್‌ಆರ್‌ಪಿ ನಂಬರ್ ಪ್ಲೇಟ್, ಪ್ಯಾನಿಕ್ ಬಟನ್, ಜಿಪಿಎಸ್‌ಗಳ ಕಡ್ಡಾಯ ಅಳವಡಿಕೆ, ಇನ್ಸೂರೆನ್ಸ್ ಮತ್ತು ಟ್ಯಾಕ್ಸ್ ಮತ್ತು ಟೋಲ್ ದರಗಳಲ್ಲಿ ಏರಿಕೆ ಮಾಡುತ್ತಿರುವುದು ಹೊರೆಯಾಗುತ್ತಿದೆ.ಇನ್ನು ಓಲಾ ಮತ್ತು ಉಬರ್‌ಗಳಂತಹ ಸೇವೆಗಳನ್ನು ಬೆಂಗಳೂರಿನ ಐಟಿ, ಬಿಟಿಗಳಿಗೆ ಮಾತ್ರ ಸೀಮಿತಗೊಳಿಸಬೇಕು.ಇಲ್ಲದೇ ಹೋದಲ್ಲಿ ಟ್ಯಾಕ್ಸಿಗಳನ್ನು ನಂಬಿಕೊಂಡು ಬದುಕುತ್ತಿರುವ ನಾವು ಮತ್ತು ನಮ್ಮ ಕುಟುಂಬಗಳು ಬೀದಿ ಪಾಲಾಗಲಿದ್ದೇವೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.ಇನ್ನು ಹಾವೇರಿ ನಗರದಲ್ಲಿಟ್ಯಾಕ್ಸಿ ವಾಹನಗಳ ನಿಲುಗಡೆ ಮಾಡಲು ಸೂಕ್ತ ಜಾಗದ ವ್ಯವಸ್ಥೆ ಇಲ್ಲ. ಕೂಡಲೇ ಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿಚಾಲಕರ ಸಂಘಕ್ಕೆ ಸರ್ಕಾರಿ ನಿವೇಶನ ನೀಡುವಂತೆ ಆಗ್ರಹಿಸಿದ ಅವರು, ಕೂಡಲೇ ಅವೈಜ್ಞಾನಿಕವಾದ ಪ್ಯಾನಿಕ್ ಬಟನ್ ವ್ಯವಸ್ಥೆಕೈಬಿಡುವಂತೆ ಇಲ್ಲವೇ ಸರ್ಕಾರವೇ ಉಚಿತವಾಗಿ ಈ ಪ್ಯಾನಿಕ್ ಬಟನ್ ಅಳವಡಿಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿಚಾಲಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ದಳಗಾರ, ಮಂಜುನಾಥ ಆವಕ್ಕನವರ, ಗಣೇಶ ಗುಂಜಳ, ಗಣೇಶ ದಂಡೆಮ್ಮನವರ, ಜಗದೀಶ ಸುಣಗಾರ, ಬಸನಗೌಡ್ರ ಪಾಟೀಲ, ಮುತ್ತು ಬಡಿಗೇರ, ಅಜೇಯ ರಜಪೂತ, ಅಶೋಕ ನರಗುಂದ, ದ್ಯಾಮಣ್ಣ ಕೊಟ್ಟೂರ, ಗಿರೀಶ ಬೆನ್ನೂರ, ಪ್ರಕಾಶ ನಂದಿ ಇತರರು ಇದ್ದರು.

Share this article