ಬಾರದ ನಿರೀಕ್ಷಿತ ನೆರವು । ಬಂದಿದ್ದೇ ₹1.25 ಲಕ್ಷ ಮಾತ್ರ
ಗುತ್ತಿಗೆದಾರ ಬಸವರಾಜ ಪುರದ ಅವರಿಂದ ₹1 ಲಕ್ಷಕನ್ನಡಪ್ರಭ ವಾರ್ತೆ ಕೊಪ್ಪಳ
ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆಯೂ ಎಂಬಿಬಿಎಸ್ ಸೀಟು ದಕ್ಕಿಸಿಕೊಂಡಿರುವ ಇಬ್ಬರು ಸಹೋದರಿಯಗೆ ನಿರೀಕ್ಷಿತ ಪ್ರಮಾಣದ ನೆರವು ಹರಿದು ಬಂದಿಲ್ಲ ಮತ್ತು ಬ್ಯಾಂಕ್ ಸಾಲ ನೀಡುವುದಕ್ಕೆ ಆಸ್ತಿಯ ಅಡ ಕೇಳುತ್ತಿರುವುದರಿಂದ ಸಂಕಷ್ಟ ಎದುರಾಗಿದೆ.ನಗರದ ಬ್ಯಾಳಿ ಓಣಿಯ ನಿವಾಸಿಯಾದ ಜ್ಯೋತಿ ಬೆಳ್ಳಟ್ಟಿ ಅವರ ಮಕ್ಕಳಾದ ಶ್ವೇತಾ ಹಾಗೂ ಸ್ನೇಹಾ ನೀಟ್ ರ್‍ಯಾಂಕಿಂಗ್ ಮೂಲ ತುಮಕೂರು ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಾರೆ.
ಆದರೆ, ಇವರಿಗೆ ಇದುವರೆಗೂ ಬಂದಿರುವ ನೆರವು ಕೇವಲ ₹1.25 ಲಕ್ಷ ಮಾತ್ರ. ಕೆಲವರು ಸೇರಿ ₹25 ಸಾವಿರ ನೀಡಿದ್ದರೆ ಗುತ್ತಿಗೆದಾರ ಬಸವರಾಜ ಪುರದ ತಲಾ ₹50 ಸಾವಿರದಂತೆ ₹ 1 ಲಕ್ಷ ಚೆಕ್ ನೀಡಿದ್ದಾರೆ.ಈಗ ಐದು ವರ್ಷಕ್ಕೆ ಶುಲ್ಕವೇ ತಲಾ ₹15.70 ಲಕ್ಷ ಆಗುತ್ತದೆ. ಇಷ್ಟೊಂದು ಸಾಲ ನೀಡುವುದಕ್ಕೆ ಬ್ಯಾಂಕಿನವರು ಯಾವುದಾದರೂ ಆಸ್ತಿ ಅಡ ಕೇಳುತ್ತಿದ್ದಾರೆ. ಆದರೆ, ಇವರಿಗೆ ಮನೆಯೇ ಇಲ್ಲ. ಬಾಡಿಗೆ ಮನೆಯಲ್ಲಿ ಇರುವುದರಿಂದ ಹಾಗೂ ಖಾಸಗಿಯಾಗಿ ತಾಯಿ ಕೆಲಸ ಮಾಡುತ್ತಿರುವುದರಿಂದ ಸಂಕಷ್ಟ ಎದುರಾಗಿದೆ.
ಈಗ ಜ್ಯೋತಿ ಬೆಳ್ಳಟ್ಟಿ ಅವರ ತಂದೆಯವರ ಮನೆಯನ್ನೇ ಅಡ ಇಟ್ಟರು ಸಹ ಬ್ಯಾಂಕಿನವರು ಅಷ್ಟೊಂದು ಕೊಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಒಬ್ಬರಿಗೆ ಮಾತ್ರ ನೀಡಬಹುದು. ಯಾರದಾದರೂ ಸರ್ಕಾರಿ ನೌಕರರ ಜಾಮೀನು ಕೇಳುತ್ತಿರುವುದರಿಂದ ಸಮಸ್ಯೆಯಾಗಿದೆ.ಬ್ಯಾಂಕಿನವರು ಈಗ ಅವರ ತಂದೆಯವರ (ವಿದ್ಯಾರ್ಥಿಗಳ ಅಜ್ಜನ ಮನೆ) ಮನೆಯ ಆಧಾರದಲ್ಲಿ ₹15 ಲಕ್ಷ ಹಾಗೂ ಶಿಕ್ಷಣ ಸಾಲ ಎಂದು ಪ್ರತ್ಯೇಕ ₹7.5 ಲಕ್ಷ ಕೊಡಬಹುದು ಎನ್ನುತ್ತಿದ್ದಾರೆ. ಆದರೆ, ಅದಕ್ಕಿನ್ನು ಅಗತ್ಯ ದಾಖಲೆಯ ಅಗತ್ಯವಿದೆ. ಹೀಗಾಗಿ, ಇವರು ಮತ್ತೆ ಸಂಕಷ್ಟದಲ್ಲಿದ್ದಾರೆ. ಸಹಾಯ ನೀಡುವವರು 9742562429 ಸಂಖ್ಯೆಗೆ ಸಂಪರ್ಕಿಸಬಹುದು.