ಗ್ಯಾರಂಟಿ ಆಸೆ ತೋರಿಸಿ ಅಭಿವೃದ್ಧಿ ಹಾದಿಗೆ ವಂಚನೆ : ಕಾರಜೋಳ

KannadaprabhaNewsNetwork |  
Published : Apr 25, 2024, 01:14 AM ISTUpdated : Apr 25, 2024, 11:00 AM IST
ಚಿತ್ರದುರ್ಗ ಲೀಡ್ ಮಾಡಿಕೊಳ್ಳಬಹುದು | Kannada Prabha

ಸಾರಾಂಶ

ಗ್ಯಾರಂಟಿ ಆಸೆಗಳ ತೋರಿಸಿ ರಾಜ್ಯದ ಅಭಿವೃದ್ಧಿ ದಿಕ್ಕು ಬದಲಾಯಿಸುವುದರ ಮೂಲಕ ರಾಜ್ಯ ಸರ್ಕಾರ ಜನರ ವಂಚಿಸುತ್ತಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆರೋಪಿಸಿದರು.

ಚಿತ್ರದುರ್ಗ: ಗ್ಯಾರಂಟಿ ಆಸೆಗಳ ತೋರಿಸಿ ರಾಜ್ಯದ ಅಭಿವೃದ್ಧಿ ದಿಕ್ಕು ಬದಲಾಯಿಸುವುದರ ಮೂಲಕ ರಾಜ್ಯ ಸರ್ಕಾರ ಜನರ ವಂಚಿಸುತ್ತಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆರೋಪಿಸಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಆವರಿಸಿದ್ದು, ಪರಿಹಾರ ಕಾರ್ಯಗಳ ಕೈಗೆತ್ತಿಕೊಳ್ಳಲಾಗಿಲ್ಲ. ನೀರಾವರಿ ಯೋಜನೆಗಳ ನಿರ್ಲಕ್ಷಿಸಲಾಗಿದೆ. ಗ್ಯಾರಂಟಿಗಳಿಗೆ ದುಡ್ಡು ಹೊಂದಿಸುವುದರಲ್ಲಿಯೇ ಸರ್ಕಾರ ಹೈರಾಣವಾಗಿ ಹೋಗಿದೆ ಎಂದರು.

ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಭದ್ರಾ ಮೇಲ್ದಂಡೆ ಬಗ್ಗೆ ಪ್ರಿಯಾಂಕ ಗಾಂಧಿ ಯಾವುದೇ ಮಾಹಿತಿ ಪಡೆಯದೆ ಮಾತನಾಡಿರುವುದು ಸರಿಯಲ್ಲ. ಜನರಿಗೆ ತಪ್ಪು ಸಂದೇಶ ರವಾನಿಸಬಾರದು. ಭದ್ರಾ ಮೇಲ್ದಂಡೆ ಕಾಮಗಾರಿ ಏನಾಗಿದೆ ಎಂಬ ಬಗ್ಗೆ ಇಲಾಖೆಯಲ್ಲಿಯೇ ಮಾಹಿತಿ ಸಿಗುತ್ತದೆ. ಇದುವರೆಗೆ ಭದ್ರಾ ಮೇಲ್ದಂಡೆಗೆ 9 ಸಾವಿರ ಕೋಟಿ ರು. ಮಾತ್ರ ಖರ್ಚಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರ 12 ಸಾವಿರ ಕೋಟಿ ರು. ಖರ್ಚು ಮಾಡಿದೆ ಎಂದು ಸುಳ್ಳು ಹೇಳುತ್ತಿದೆ.

2013ರಿಂದ 18ರವರೆಗೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದಾಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸುಳ್ಳು ಮಾಹಿತಿ ಯಾರಿಗೂ ಕೊಡಬಾರದು ಎಂದು ಎಚ್ಚರಿಸಿದರು.ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಬಜೆಟ್‍ನಲ್ಲೇ ಐದು ಸಾವಿರದ ಮುನ್ನೂರು ಕೋಟಿ ರು.ಗಳನ್ನು ಘೋಷಿಸಿದೆ. ಬಿ.ಎನ್.ಚಂದ್ರಪ್ಪ 2014ರಿಂದ 2019ರವರೆಗೆ ಸಂಸದರಾಗಿದ್ದರೂ ಒಮ್ಮೆಯೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಮಾತನಾಡಲಿಲ್ಲ. ಈಗ ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿಸಹಿಸಲು ಆಗದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕೇಂದ್ರ ಕೇಳಿರುವ ಕೆಲವು ಅಗತ್ಯಗಳನ್ನು ಪೂರೈಕೆ ಮಾಡಿದರೆ ಭದ್ರಾ ಮೇಲ್ದಂಡೆ ಹಣ ಬಿಡುಗಡೆಯಾಗುತ್ತದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸರ್ಕಾರ ಒತ್ತು ಕೊಡುತ್ತಿದೆ. ವಿಮಾನ ನಿಲ್ದಾಣವಾದರೆ ಕೈಗಾರಿಕೋದ್ಯಮ ಬೆಳೆಯುತ್ತದೆ. ದೇಶಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿರುವುದರಿಂದ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಬಹುಮತಗಳಿಂದ ನನ್ನನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಗೋವಿಂದ ಕಾರಜೋಳ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭಿವೃದ್ಧಿಯಾಗಬೇಕಾದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ವಿನಂತಿಸಿದರು.

10 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿರುವ ಹದಿನೆಂಟುವರೆ ಲಕ್ಷ ಮತದಾರರರಲ್ಲಿ ಹದಿನಾರು ಲಕ್ಷ 37 ಸಾವಿರ ರು. ಜನರಿಗೆ ಅಕ್ಕಿ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಲ್ಲಿ 963 ಕಿಮೀ ರಸ್ತೆಯಾಗಿದೆ. ಅದೇ ನಮ್ಮ ಸರ್ಕಾರದಲ್ಲಿ 1946 ಕಿಮೀ ರಸ್ತೆಯಾಗಿದೆ. 3,37,527 ರೈತರಿಗೆ ಕಿಸಾನ್ ಸಮ್ಮಾನ್ ಸಿಕ್ಕಿದೆ. ಉಜ್ವಲ ಯೋಜನೆಯಡಿ 25331 ಜನರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 2 ಲಕ್ಷ 75 ಸಾವಿರದ 945 ಮನೆಗಳಿಗೆ ಶೌಚಾಲಯ ಕಟ್ಟಿಸಲಾಗಿದೆ. ಜಿಲ್ಲೆಯಲ್ಲಿ ಹದಿನೆಂಟು ಸಾವಿರದ 380 ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಬಿಜೆಪಿ ಖಾಲಿ ಚೊಂಬು ಕೊಟ್ಟಿದೆ ಎಂದು ಹೀಯಾಳಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ನಾಡಿನ ಜನರಿಗೆ ಚಿಪ್ಪು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಕೊಲೆ, ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದು ಕೂಗುವವರ ಮೇಲೆ ಕ್ರಮವಿಲ್ಲ. ಎಸ್‌ಡಿಪಿಐ, ಪಿಎಫ್ಐ ಮೇಲೆ ದಾಖಲಾಗಿದ್ದ 175 ಕೇಸ್‌ಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದು ಹಾಕಿ 1600 ಮಂದಿಯನ್ನು ಬಿಡುಗಡೆಗೊಳಿಸಿದೆ. ಕುಕ್ಕರ್ ಬಾಂಬರ್‌ಗಳೆಲ್ಲ ಕಾಂಗ್ರೆಸ್‍ನವರ ಬದ್ರರ್ಸ್. ರಾಜ್ಯದಲ್ಲಿ ಔರಂಜೇಬ, ಟಿಪ್ಪು ಆಡಳಿತ ನಡೆಯುತ್ತಿದೆ. 1700ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಜಾನುವಾರುಗಳಿಗೆ ಮೇವು ನೀರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಬರದ ಭಾಗ್ಯ, ಮಹಿಳೆಯರಿಗೆ ಹತ್ಯೆ ಭಾಗ್ಯ ಕೊಟ್ಟಿದ್ದಾರೆ. ಕ್ರೈಂ, ಸೈಬರ್ ಕ್ರೈಂ ಜಾಸ್ತಿಯಾಗಿದೆ. ಛಾಪ ಕಾಗದದ ಬೆಲೆ ಏರಿಕೆ, ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಇಂತಹ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನ ಸರಿಯಾದ ಬುದ್ಧಿ ಕಲಿಸುತ್ತಾರೆಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕ ಆಡಳಿತವನ್ನು ಮೆಚ್ಚಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನರೇಂದ್ರ ಮೋದಿಗೆ ಬಲ ಬಂದಂತಾಗಿದೆ. ದೇಶದ ಭದ್ರತೆಗೆ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ನಾಳೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬಹುಮತಗಳಿಂದ ಗೆಲ್ಲಿಸಿ ಸಂಸತ್‍ಗೆ ಕಳಿಸಿಕೊಡಿ ಎಂದು ಮತದಾರರನ್ನು ಕೋರಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ ಬೇದ್ರೆ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಪತ್ರಿಕಾಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌