ಅಳ್ನಾವರ: ಕಬ್ಬಿನ ದರ ನಿಗದಿಪಡಿಸುವ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅ. 26ರಂದು ಬೆಳಗಾವಿಯಲ್ಲಿ ನಡೆಯುವ ಸಭೆಗೆ ಭಾಗವಹಿಸುವ ಕುರಿತು ಪೂರ್ವಭಾವಿ ಸಭೆ ಅಳ್ನಾವರದಲ್ಲಿ ಜರುಗಿತು.
ಅಳ್ನಾವರ ತಾಲೂಕಿನಿಂದ ಕೋಗಿಲಗೇರಿ ಗ್ರಾಮದ ಭರತೇಶ್ ಪಾಟೀಲ್, ಕುಂಬಾರಕೊಪ್ಪ ಗ್ರಾಮದ ಅಶೋಕ ಜೋಡಟ್ಟಿ ಹಾಗೂ ರವಿ ವಡ್ಡರ್ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಅಳ್ನಾವರ ತಾಲೂಕಿನ ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದು, ಇವರ ಜತೆಗೆ ಭಾನುವಾರ ತಾಲೂಕಿನ ರೈತ ಮುಖಂಡರು ಸಭೆಯನ್ನು ನಡೆಸಿದರು. ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ತಮಗೆ ಬರಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದುಕೊಂಡೆ ಬರಬೇಕು ಎಂದು ಒತ್ತಾಯಿಸಿ ಬೆಂಬಲ ಸೂಚಿಸಿದರು.
ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೈಕೊಳ್ಳಲಾಗುವ ನಿರ್ಣಯದ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡಲು ರೈತರು ನಿಶ್ಚಯಿಸಿದರು.ಮುಖ್ಯಮಂತ್ರಿಗಳ ಸಭೆಯಲ್ಲಿ ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಮುಂದಿನ ಹೋರಾಟವನ್ನು ತೀವ್ರ ಗೊಳಿಸಲಾಗುವುದೆಂದು ಸಭೆಯಲ್ಲಿ ಸೇರಿದ್ದ ರೈತರು ತಿಳಿಸಿದರು.