ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ತಕ್ರಮವನ್ನು ಪಟ್ಟಣದ ಸರ್ಕಾರಿ ಬಾಲಕರ ಪ.ಪೂ. ಕಾಲೇಜಿನ ಮೈದಾನದಲ್ಲಿ ಧ್ವಜಾರೋಹಣ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ ಮಂಗಳಾ ಎಂ. ಹೇಳಿದರು.ಬುಧವಾರ ಇಲ್ಲಿನ ತಹಸೀಲ್ದಾರ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಗಣರಾಜ್ಯೋತ್ಸವ ಆಚರಣೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ.22 ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಬಾಲಕರ ಸರ್ಕಾರಿ ಪಪೂ ಕಾಲೇಜು ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಜರುಗುವುದು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿ, ಪತ್ರಕರ್ತರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.
ತಾಲೂಕಿನ ಎಲ್ಲ ಕಚೇರಿಗಳಲ್ಲಿ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿ, 8.45ಗಂಟೆಗೆ ಬಾಲಕರ ಸ್‌ಕಾರಿ ಪಪೂ ಕಾಲೇಜಿನ ಮೈದಾನಕ್ಕೆ ಎಲ್ಲ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರರು ಸೂಚಿಸಿದರು. ಸರ್ಕಾರಿ ಕಚೇರಿಗಳನ್ನು 75ನೇ ಗಣರಾಜ್ಯೋತ್ಸವ ನಿಮಿತ್ತ ಎರಡು ದಿನ ದೀಪಾಲಂಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರೌಢ, ಪಪೂ ಕಾಲೇಜು ಹಾಗೂ ಪದವಿಮಟ್ಟದ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು. ಪ್ರತಿಸಲ ಬಿಸಿಲಿನಲ್ಲಿ ನಿಂತು ಶಾಲಾ ಮಕ್ಕಳು ಕಾರ್ಯಕ್ರಮ ವೀಕ್ಷಿಸುವಂತಾಗಿದೆ. ಈ ಬಾರಿ ಪೆಂಡಾಲ ಹಾಕಿಸಿ ಕುಳಿತುಕೊಂಡು ನೆರಳಿನಲ್ಲಿ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡುವಂತೆ ಶಿಕ್ಷಕರು ಹಾಗೂ ಇನ್ನಿತರರು ತಹಸೀಲ್ದಾರರಿಗೆ ಸಲಹೆ ನೀಡಿದರು.ಸಭೆಯಲ್ಲಿ ಉಪತಹಶೀಲ್ದಾರ ವೀರೇಶ ಬಡಿಗೇರ, ಪಿಎಸ್ಐ ಲಕ್ಷ್ಮಣ ಆರಿ, ಪುರಸಭೆ ಎಫ್‌ಡಿಸಿ, ಸಿ.ಎಸ್.ಗಾಜಿ, ಪ್ರಾಚಾರ್ಯ ವಿಠ್ಠಲ ಕಳಸಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವಿ.ತಿರಕನ್ನವರ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ.ಜಾಧವ್, ಆರ್.ಬಿ.ಪಾಗಿ, ಬಿ.ಐ. ಬಿಳಿಕುದರಿ, ಸಂಗಮೇಶ ಯಲಿಗಾರ, ನೋಂದಣಿ ಅಧಿಕಾರಿ ಎಂ.ಎಸ್.ಗಾಣಿಗೇರ, ಖಜಾನೆ ಅಧಿಕಾರಿ ಎಂ.ಪಿ.ಪಾಟೀಲ, ಕೆ.ಎಲ್.ಗದಗಿನ, ಪಿಡಬ್ಲ್ಯೂಡಿ ಅಭಿಯಂತರ ಎ.ಕೆ.ಮಕಾನದಾರ ಅರಣ್ಯ ಇಲಾಖೆಯ ಎಸ್.ಐ. ದೊಡಮನಿ ಸೇರಿದಂತೆ ವಿವಿಧ ಇಲಾಖೆ ಪ್ರತಿನಿಧಿಗಳು ಭಾಗವಹಿಸಿದ್ದರು.