ಹೈಕಮಾಂಡ್‌ನಿಂದ ಸರಿ ತಪ್ಪು ನಿರ್ಧಾರ: ಚಲುವರಾಯಸ್ವಾಮಿ

KannadaprabhaNewsNetwork | Published : Nov 4, 2023 12:30 AM

ಸಾರಾಂಶ

ನಮ್ಮ ಕೆಲಸ ರೈತರಪರ ಕೆಲಸ ಮಾಡುವುದು. ಸಣ್ಣ ಪುಟ್ಟ ವ್ಯತ್ಯಾಸಗಳು ಎಲ್ಲಾ ಪಕ್ಷಗಳಲ್ಲೂ ಇದ್ದೇ ಇರುತ್ತದೆ. ಅದನ್ನು ಸರಿಪಡಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ. ಕೆಲವರು ವೈಯಕ್ತಿಕವಾಗಿ ಏನಾದರೂ ಮಾತನಾಡಬಹುದು.
ಕನ್ನಡಪ್ರಭ ವಾರ್ತೆ ಮಡಿಕೇರಿ ಪಕ್ಷದ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯದ ಅಧ್ಯಕ್ಷರು ಅವರೆಲ್ಲರೂ ಕುಳಿತು ಸರಿ ತಪ್ಪು ನಿರ್ಧರಿಸುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಕೆಲಸ ರೈತರಪರ ಕೆಲಸ ಮಾಡುವುದು. ಸಣ್ಣ ಪುಟ್ಟ ವ್ಯತ್ಯಾಸಗಳು ಎಲ್ಲಾ ಪಕ್ಷಗಳಲ್ಲೂ ಇದ್ದೇ ಇರುತ್ತದೆ. ಅದನ್ನು ಸರಿಪಡಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ. ಕೆಲವರು ವೈಯಕ್ತಿಕವಾಗಿ ಏನಾದರೂ ಮಾತನಾಡಬಹುದು. ಅದನ್ನು ಅಲ್ಲಿಯೇ ಸರಿ ಮಾಡುತ್ತಾರೆ ಎಂದರು. ಮುಸ್ಲಿಮರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಸಮುದಾಯದ ಜನರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದ ಏಳು ಕೋಟಿ ಜನರಿಗೆ ನಾವು ಧನ್ಯವಾದ ಸಲ್ಲಿಸಿದ್ದೇವೆ. ಆದರೆ ಅವರ ಸಮುದಾಯದ ವಿಚಾರಕ್ಕೆ ಬಂದಾಗ ನಾವು ಹೆಚ್ಚು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡಿರಬೇಕು. ಅದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಜಮೀರ್ ಅಹಮ್ಮದ್ ಖಾನ್ ಪರ ಬ್ಯಾಟ್ ಬೀಸಿದರು. ಡಾ. ಜಿ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಣ್ಣ ಹೇಳಿರುವುದಕ್ಕೆ ನಾನು ಉತ್ತರಕೊಡುವುದಕ್ಕೆ ಆಗುತ್ತಾ? ಅದು ರಾಜಣ್ಣ ಅವರ ವೈಯಕ್ತಿಕ ಹೇಳಿಕೆ.ಮುಖ್ಯಮಂತ್ರಿ ಅಥವಾ ಮಂತ್ರಿ ಮಂಡಳ ರಚಿಸುವುದಕ್ಕೆ ಪಕ್ಷದ ಹೈಕಮಾಂಡ್ ಇದೆ. ಅವರು ವೈಯಕ್ತಿಕವಾಗಿ ಯಾಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಯಾವ ಸಮುದಾಯದ ವಿರೋಧ ಅಲ್ಲ. ನಮ್ಮ ಪಕ್ಷ ಯಾವ ನಿರ್ಧಾರ ಮಾಡುತ್ತೋ ಅದಕ್ಕೆ ನಾನು ಬದ್ಧ ಎಂದರು. ರಾಜ್ಯದಲ್ಲಿ ಬರಗಾಲವಿದೆ, ಕಾವೇರಿ ಸಮಸ್ಯೆ ಇದೆ. ಅದರ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಹೇಳಿದರು. ನವೆಂಬರ್ ಅಂತ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು. ಇದರಲ್ಲಿ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ಆದರೆ ಇಬ್ಬರಿಗೂ ಒಂದೇ ಬಾರಿಯೇ ನೇಮಕ ಮಾಡಲಾಗುವುದೇ ಅಥವಾ ಬೇರೆ ಬೇರೆ ಸಮಯದಲ್ಲಿ ಮಾಡುವುದೇ ಎಂಬ ಕುರಿತು ಚಿಂತನೆ ಇದೆ. ಈಗಾಗಲೇ ರಾಜ್ಯ ಉಸ್ತುವಾರಿ ಸುರ್ಜೇವಾಲ್ ಮತ್ತು ವೇಣುಗೋಪಾಲ್ ಬಂದು ಸೂಚನೆ ನೀಡಿದ್ದಾರೆ. ಇದನ್ನು ಸಿಎಂ ಮತ್ತು ರಾಜ್ಯಧ್ಯಕ್ಷರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

Share this article