ಚಾಮುಂಡೇಶ್ವರಿ ಕ್ಷೇತ್ರದ 47 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ

KannadaprabhaNewsNetwork |  
Published : Aug 06, 2026, 01:15 AM IST
27 | Kannada Prabha

ಸಾರಾಂಶ

ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ, ನಾಲೆಗೆ 120 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಮೈಸೂರುಮುಂದಿನ ದಿನಗಳಲ್ಲಿ ಕುಡಿಯುವ ನೀರು, ಜಾನುವಾರಿಗೆ ನೀರು ದೊರೆಯುವಂತೆ ಮಾಡಲು ಚಾಮುಂಡೇಶ್ವರಿ ಕ್ಷೇತ್ರದ 47 ಕೆರೆಗಳಿಗೆ ಮೂರು ತಿಂಗಳೊಳಗೆ ನೀರು ತುಂಬಿಸಬೇಕು. ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಕೆರೆಗಳನ್ನು ವಿಂಗಡಿಸಿಕೊಂಡು ಕಾಲಮಿತಿಯೊಳಗೆ ಭರ್ತಿ ಮಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬರಗಾಲದಿಂದ ಅನೇಕ ಕಡೆಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಕಳೆದ ವರ್ಷ ತುಂಬಿದ್ದ ಕೆರೆಗಳು ಖಾಲಿಯಾಗಿವೆ. ಹಾಗಾಗಿ, ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ತಂತಮ್ಮ ವ್ಯಾಪ್ತಿಯ ಕೆರೆಗಳನ್ನು ಹಂಚಿಕೊಂಡು ತುಂಬಿಸಿದರೆ ಮುಂದೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.ಕೆರೆಗಳನ್ನು ತುಂಬಿಸುವುದು ಎಂಜಿನಿಯರ್‌ ಗಳ ಕೆಲಸ ಎನ್ನುವುದಕ್ಕಿಂತಲೂ ಮಾನವೀಯತೆಯಾಗಿದೆ. ಹಳ್ಳಿಗಾಡಿನ ರೈತರಿಗೆ ಅನುಕೂಲವಾಗಿ ಮೂರು ಹೊತ್ತಿನ ಊಟಕ್ಕೆ ಸಹಕಾರಿಯಾಗಲಿದೆ. ಅಧಿಕಾರಿಗಳು ಪುಣ್ಯದ ಕೆಲಸ ಎಂದು ಭಾವಿಸಬೇಕು. ಜನರಿಗೆ ನೀರು ಸಿಗುವಂತೆಮಾಡಿದರೆ ನೆನೆದುಕೊಳ್ಳುತ್ತಾರೆ. ಇಬ್ಜಾಲ ಏತ ನೀರಾವರಿ ಯೋಜನೆಯಿಂದ ಗುಜ್ಜೇಗೌಡನಪುರ, ಹಾರೋಹಳ್ಳಿ, ಹಾರೋಹಳ್ಳಿ ಹೊಸಕೆರೆ, ಶೆಟ್ಟಿಕೆರೆ, ಚಿಕ್ಕನಹಳ್ಳಿ, ಜಯಪ್ಪನ ಹೊಸಕೆರೆ, ಮಾವಿನಹಳ್ಳಿ, ಚಿಕ್ಕಕೆರೆ, ನವಿಲುಕಟ್ಟೆ, ಜೋಡಿಕಟ್ಟೆ, ಕೆಗ್ಗರೆ, ಕೊಂಗನಕಟ್ಟೆ ಕೆರೆ, ಪಣಿಯನಕಟ್ಟೆ, ತಿಬ್ಬಯ್ಯನಕೆರೆ, ಕೆರೆಹುಂಡಿಕೆರೆ, ಧನಗಳ್ಳಿಕೆರೆ, ಕಾಡಗುಡ್ಡನಕೆರೆ, ಕೆಂಚಲಗೂಡು, ಕೆಬ್ಬೆಕಟ್ಟೆ, ಕೆರೆಹುಂಡಿಕಟ್ಟೆ, ಟಿ. ಕಾಟೂರು, ದೊಡ್ಡಹುಂಡಿಕಟ್ಟೆ, ಸಾಲುಂಡಿ, ಮಲ್ಲಪ್ಪನಕಟ್ಟೆ, ಕೆಲ್ಲಹಳ್ಳಿ ಕೆರೆ, ಉದ್ಬೂರು ದೊಡ್ಡಕೆರೆ, ಚಿಕ್ಕನಂದಿ ಏತ ನೀರಾವರಿ ಯೋಜನೆಯಡಿ 13 ಕೆರೆಗಳನ್ನು ತುಂಬಿಸಬೇಕು ಎಂದು ಅವರು ಸೂಚಿಸಿದರು.ಈ ಬಾರಿ ಪೂರ್ಣಪ್ರಮಾಣದಲ್ಲಿ ಕೆರೆಗಳನ್ನು ತುಂಬಿಸಿದ ಬಳಿಕ ಮುಂದಿನ ಕೆರೆಗಳಿಗೆ ಹರಿಯುವಂತೆ ಮಾಡಬೇಕು. ಕೆರೆಗಳನ್ನು ತುಂಬಿಸುವಾಗ ಅಧಿಕಾರಿಗಳು ಪರಿಶೀಲಿಸಬೇಕು. ಯಾವುದೇ ಭಾಗದಲ್ಲಿ ನೀರು ಪೋಲಾಗಿ ಜಮೀನು ಹಾಳಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗಲಿದೆ ಎಂದು ಸೂಕ್ಷ್ಮವಾಗಿ ಸಲಹೆ ನೀಡಿದರು. 120 ಕೋಟಿ ರೂ. ಪ್ರಸ್ತಾವನೆಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಜತೆಗೆ, ಅಭಿವೃದ್ಧಿಗಾಗಿ 120 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರತಿಯೊಂದು ಕೆರೆಗೆ ನಾಲೆಯಿಂದ ನೀರು ಹರಿಸುವ ಮಾರ್ಗ, ಅಚ್ಚುಕಟ್ಟು ಪ್ರದೇಶದ ರಸ್ತೆ, ನಾಲೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕವಾಗಿ ಡಿಪಿಆರ್ ತಯಾರಿಸಿ ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು. ಬಜೆಟ್ ಅಧಿವೇಶನದ ವೇಳೆ ಈಗಾಗಲೇ ರೂಪಿಸಿರುವ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಪ್ರಸ್ತಾವನೆಗೆ ಅನುಮೋದನೆ ಕೊಡಿಸಿ ಅನುದಾನ ಬಿಡುಗಡೆ ಮಾಡಿಸುವೆ ಎಂದು ಅವರು ಭರವಸೆ ನೀಡಿದರು.ಕೆರೆಗಳಿಗೆನೀರು ಹರಿಸಿ ಸುಮ್ಮನಾಗಬಾರದು. ಕೆರೆಗಳಿಗೆ ರೈತರು ಹೋಗುವಂತೆ ಮಾಡಿದರೆ ಅನುಕೂಲವಾಗಲಿದೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರುವಂತಹ ಎಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸಲು ಮತ್ತೊಮ್ಮೆ ಪರಿಶೀಲಿಸಿ ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಹೇಳಿದರು.ಸಿಎಂರಿಂದಲೇ ಸನ್ಮಾನ: ಕೆರೆಗಳನ್ನು ಭರ್ತಿ ಮಾಡಿದ ಮೇಲೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವರನ್ನು ಕರೆತಂದು ಅವರಿಂದಲೇ ಅಧಿಕಾರಿಗಳಿಗೆ ಸನ್ಮಾನಿಸಲಾಗುವುದು ಎಂದು ಹುರಿದುಂಬಿಸಿದರು.ಕಾವೇರಿ ನೀರಾವರಿ ನಿಗಮದ ಇಇ ಭಾಸ್ಕರ್ ಅವರು ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆಗಳು, ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಕುರಿತು ವಿವರಣೆ ನೀಡಿದರು. ಎಇಇಗಳಾದ ನವೀನ್, ಜೀವನ್‌ ಕುಮಾರ್, ದೀಪಕ್, ಎಇ ಮಧುಶ್ರೀ, ರಾಘವೇಂದ್ರ, ಜಗದೀಶ್, ಮೈಮುಲ್ ಮಾಜಿ ಅಧ್ಯಕ್ಷ ಕೆ. ಈರೇಗೌಡ, ಜಯಪುರಂ ಗ್ರಾಪಂ ಮಾಜಿ ಅಧ್ಯಕ್ಷ ಜವರನಾಯಕ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರ ಬರ: ಪರಿಹಾರ ಕ್ರಮಕ್ಕೆ ಸಚಿವ ಬಿ.ಎಸ್.ಸುರೇಶ ಸೂಚನೆ
ದಾಂಪತ್ಯದಲ್ಲಿ ವಿಶ್ವಾಸ ವಿಟ್ಟಲ್ಲಿ ಆನಂದ ಪ್ರಾಪ್ತಿ