ಕನ್ನಡಪ್ರಭ ವಾರ್ತೆ ಮೈಸೂರುಜಲಕೃಷಿ ಕ್ಷೇತ್ರದಲ್ಲಿ ಅಪಾಯ ನಿರ್ವಹಣೆಗೆ ವಿಮೆಯು ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ವಿಮೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಎಸ್. ವರುಣ್ ತಿಳಿಸಿದರು.ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್, ಪ್ರಾದೇಶಿಕ ಕಚೇರಿ ವತಿಯಿಂದ ಜಲಕೃಷಿಕರಲ್ಲಿ ವಿಮೆ, ಸುಸ್ಥಿರ ಜಲಕೃಷಿ ಪದ್ಧತಿಗಳು, ರೋಗ ನಿರ್ವಹಣೆ, ಅಪಾಯ ಜಲಕೃಷಿ ವಿಮೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉಪ ಮಹಾಪ್ರಬಂಧಕ ಕೆ. ನಾಗರಾಜನ್ ಮಾತನಾಡಿ, ಪ್ರಕೃತಿ ವಿಕೋಪ, ರೋಗ ಹರಡುವಿಕೆ ಹಾಗೂ ಇತರ ಅನಿರೀಕ್ಷಿತ ಕಾರಣಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ಜಲಕೃಷಿಕರನ್ನು ರಕ್ಷಿಸುವಲ್ಲಿ ಜಲಕೃಷಿ ವಿಮೆಯು ಮಹತ್ವದ ಪಾತ್ರ ವಹಿಸುತ್ತದೆ. ವಿಮೆಯ ಮೂಲಕ ರೈತರು ಆರ್ಥಿಕ ಸ್ಥಿರತೆ ಹಾಗೂ ಭದ್ರತೆ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಐ.ಸಿ.ಎ.ಆರ್.ಸಿ.ಐ.ಎಫ್.ಎ ಪ್ರಾದೇಶಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸತೀಶ ಅವುಂಜೆ ಮಾತನಾಡಿ, ಜಲಕೃಷಿಯ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳ ಕುರಿತು ಉಪನ್ಯಾಸ ನೀಡಿ, ವೈಜ್ಞಾನಿಕ ಜಲಕೃಷಿ ಪದ್ಧತಿಗಳು, ಕೆರೆ ನಿರ್ವಹಣೆ, ಉತ್ಪಾದನಾ ತಂತ್ರಜ್ಞಾನ ಹಾಗೂ ರೋಗ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು.ಉತ್ಪಾದಕತೆ ಹೆಚ್ಚಿಸಲು ಹಾಗೂ ಜಲಕೃಷಿಯ ಸುಸ್ಥಿರ ಅಭಿವೃದ್ಧಿಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಮೀನುಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಗಣೇಶ್ ಅವರು ಜಲಕೃಷಿಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳು ಹಾಗೂ ಸಹಾಯಧನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಗುಣಮಟ್ಟದ ಉತ್ಪಾದನೆ, ಸುಸ್ಥಿರ ಜಲಕೃಷಿ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಪರಿಣಾಮಕಾರಿ ರೋಗ ನಿಯಂತ್ರಣ ಕ್ರಮಗಳ ಮಹತ್ವವನ್ನೂ ಅವರು ವಿವರಿಸಿದರು.ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಗಿರೀಶ ಓಂಕಾರ್ ಮಾತನಾಡಿ, ಸುಸ್ಥಿರ ಜಲಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣದಲ್ಲಿ ಮೀನುಗಾರಿಕೆ ಇಲಾಖೆಯ ಪಾತ್ರವನ್ನು ವಿವರಿಸಿ, ರೈತರು ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಆಡಳಿತಾಧಿಕಾರಿ ನವೀನ್ ಕುಮಾರ್ ಉಪನ್ಯಾಸ ನೀಡಿ, ಮೀನುಗಾರರ ಅಪಾಯ ನಿರ್ವಹಣೆ ಮತ್ತು ಆರ್ಥಿಕ ಭದ್ರತೆಯಲ್ಲಿ ಜಲಕೃಷಿ ವಿಮೆಯ ಪಾತ್ರ ಕುರಿತು ಜಲಕೃಷಿ ವಿಮೆಯ ವ್ಯಾಪ್ತಿ, ಸೌಲಭ್ಯಗಳು ಹಾಗೂ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ವಿವರವಾದ ಮಾಹಿತಿ ನೀಡಿದರು.ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು, ತಾಂತ್ರಿಕ ತಜ್ಞರು ಹಾಗೂ ಜಲಕೃಷಿಕರ ನಡುವೆ ಸಮಾಲೋಚನೆ ನಡೆಯಿತು. ಜಲಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳು, ರೋಗ ನಿರ್ವಹಣೆ, ವೈಜ್ಞಾನಿಕ ಕೃಷಿ ಪದ್ಧತಿ, ಸುಸ್ಥಿರ ತಂತ್ರಜ್ಞಾನ ಅಳವಡಿಕೆ ಹಾಗೂ ವಿಮಾ ರಕ್ಷಣೆಯ ಅಗತ್ಯತೆಯ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಯಿತು.ಜಲಕೃಷಿ ವಿಮೆಯ ಕುರಿತು ಹೆಚ್ಚಿನ ಜಾಗೃತಿ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಜಲಕೃಷಿಕರ ಜೀವನೋಪಾಯವನ್ನು ಭದ್ರಪಡಿಸುವುದರ ಜೊತೆಗೆ ರಾಜ್ಯದಲ್ಲಿ ಜಲಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಮೈಸೂರು, ರಾಮನಗರ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಹಾಗೂ ವ್ಯವಸ್ಥಾಪಕಿ ಜಯಂತಿ ಹರಿಹರನ್, ಜಲಕೃಷಿಕರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.