27ರಂದು ಕೆಂಪೇಗೌಡರ ಜಯಂತಿ ಆಚರಣೆಗೆ ನಿರ್ಧಾರ

KannadaprabhaNewsNetwork | Updated : Jun 19 2024, 01:04 AM IST

ಸಾರಾಂಶ

ಇನ್ನೆರಡು ದಿನಗಳಲ್ಲಿ ಎರಡು ತಾಲೂಕುಗಳ ಎಲ್ಲ ಇಲಾಖೆಯ ಅಧಿಕಾರಿಗಳ. ಮತ್ತೊಂದು ಸಭೆ ನಡೆಸಿ ಕಾರ್ಯಕ್ರಮದ ರೂಪು ರೇಷೆ ಸಿದ್ಧಪಡಿಸಿ ಇಲಾಖಾವಾರು ಜವಾಬ್ದಾರಿ ವಹಿಸಿ ಆ ಸಂಬಂಧ ನನಗೆ ಸಮಗ್ರ ವರದಿ ನೀಡಬೇಕೆಂದು ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಜೂ. 27ರಂದು ಗುರುವಾರ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ವಿಜೃಂಣೆಯಿಂದ ಆಚರಣೆ ಮಾಡಲು ನಿರ್ಧರಿಸಲಾಯಿತು.

ಪಟ್ಟಣದ ಆಡಳಿತ ಸೌಧದಲ್ಲಿರುವ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ತಾಲೂಕು ನಾಡಹಬ್ಬಗಳ ಸಮಿತಿಯಿಂದ ನಡೆದ ಕೆಂಪೇಗೌಡರ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ರವಿಶಂಕರ್ ಅವರ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು.

ಶಾಸಕ ಡಿ. ರವಿಶಂಕರ್ ಮಾತನಾಡಿ, ಅಂದು ಬೆಳಗ್ಗೆ 11ಕ್ಕೆ ಸಾಲಿಗ್ರಾಮದ ತಾಲೂಕು ಕಚೇರಿಯ ಮುಂದೆ ಬೃಹತ್ ವೇದಿಕೆ ನಿರ್ಮಾಣ ಮಾಡಿ ಕಾರ್ಯಕ್ರಮ ನಡೆಸಲಿದ್ದು, ಇದಕ್ಕಾಗಿ ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕು ತಹಸೀಲ್ದಾರ್ ಗಳು ಸಮನ್ವಯತೆಯಿಂದ ಕೆಲಸ ಮಾಡಿ ಸಮಾರಂಭದ ಯಶಸ್ವಿಗೆ ದುಡಿಯಬೇಕೆಂದು ಸಲಹೆ ನೀಡಿದರು.

ಇನ್ನೆರಡು ದಿನಗಳಲ್ಲಿ ಎರಡು ತಾಲೂಕುಗಳ ಎಲ್ಲ ಇಲಾಖೆಯ ಅಧಿಕಾರಿಗಳ. ಮತ್ತೊಂದು ಸಭೆ ನಡೆಸಿ ಕಾರ್ಯಕ್ರಮದ ರೂಪು ರೇಷೆ ಸಿದ್ಧಪಡಿಸಿ ಇಲಾಖಾವಾರು ಜವಾಬ್ದಾರಿ ವಹಿಸಿ ಆ ಸಂಬಂಧ ನನಗೆ ಸಮಗ್ರ ವರದಿ ನೀಡಬೇಕೆಂದು ತಾಕೀತು ಮಾಡಿದರು.

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಎರಡು ತಾಲೂಕಿನ 10 ಮಂದಿ ವಿವಿಧ ಕ್ಷೇತ್ರಗಳ ಸಾಧಕರು, ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದು, ಅದಕ್ಕಾಗಿ ಕೂಡಲೇ ಪಟ್ಟಿ ಸಿದ್ಧಪಡಿಸಬೇಕೆಂದು ನುಡಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ಮಾತನಾಡಿ, ಇದೇ ಪ್ರಥಮ ಬಾರಿಗೆ ಕೆ. ಆರ್. ನಗರ ತಾಲೂಕು ಕೇಂದ್ರ ಹೊರತುಪಡಿಸಿ ಸಾಲಿಗ್ರಾಮ ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಇದಕ್ಕಾಗಿ ಅಧಿಕಾರಿಗಳು ಪರಸ್ಪರ ಸಮನ್ವತೆಯಿಂದ ಕೆಲಸ ಮಾಡಿ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕೆಂದರು.

ತಹಸೀಲ್ದಾರ್ ಸಿ. ಎಸ್. ಪೂರ್ಣಿಮ, ಒಕ್ಕಲಿಗ ಸಮಾಜದ ಮುಖಂಡರಾದ ಮಿರ್ಲೆ ನಂದೀಶ್, ಎಂಬಿ ಲೋಕನಾಥ್ ರಾಮಪ್ರಸಾದ್, ವೈ.ಎಸ್. ಜಯಂತ್, ಎಂ.ಜೆ. ರಮೇಶ್, ಕೆ.ಜಿ. ಸುಬ್ರಹ್ಮಣ್ಯ, ಉದಯಶಂಕರ್ ಮಾತನಾಡಿ, ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನಿರ್ದೇಶಕಿ ಸರಿತಾ ಜವರಪ್ಪ, ತಾಲೂಕು ಒಕ್ಕಲಿಗರ ಸಂಘದ ಹಿರಿಯ ಉಪಾಧ್ಯಕ್ಷ ಎಚ್.ಪಿ. ಪರಶುರಾಮ್, ಪ್ರಧಾನ ಕಾರ್ಯದರ್ಶಿ ಬಿ. ಅಣ್ಣಾಜಿ ಗೌಡ, ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡುಗಂಭದ ಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ. ಸುಬ್ರಹ್ಮಣ್ಯ, ನರಸಿಂಹರಾಜು, ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಜಿಲ್ಲಾ ಕಾಂಗ್ರೆಸ್ ಮುಖಂಡ ವೆಂಕಟೇಶ್, ತಾಪಂ ಇಒ ಜಿ.ಕೆ. ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಡಿ. ನಟರಾಜು, ಬಿಇಓ ಆರ್. ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.

Share this article