ನ.1ರಂದೇ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

KannadaprabhaNewsNetwork | Published : Oct 9, 2024 1:41 AM
Follow Us

ಸಾರಾಂಶ

ಶಾಸಕ ಹಲಗೇಕರ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನವಾಗಿದ್ದು, ದೀಪಾವಳಿ ಹಬ್ಬ ಬಂದಿರುವುದರಿಂದ ಸಮಸ್ಯೆಯಾಗಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಪ್ರಸಕ್ತ ಬಾರಿ ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಒಂದೇ ದಿನ ಬಂದಿವೆ. ಆದರೆ ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ ನ.1ರಂದೇ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಗೃಹದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದುವರೆಗೆ ರಾಜ್ಯೋತ್ಸವ ಆಚರಣೆಗೆ ಬೇಕಾದ ವಂತಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಸಲದಿಂದ ಅದನ್ನು ನಗದುರಹಿತ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಮೂಲಕ ವಂತಿಗೆ ಸಂಗ್ರಹ ಮತ್ತು ರಾಜ್ಯೋತ್ಸವಕ್ಕೆ ತಗಲುವ ವೆಚ್ಚಗಳ ಪಾವತಿಯನ್ನು ಮಾಡಬೇಕು. ಕಾರ್ಯಕ್ರಮ ಸಂಪನ್ನಗೊಂಡ ಒಂದು ವಾರದ ಒಳಗೆ ಎಲ್ಲ ವ್ಯವಹಾರಗಳನ್ನು ಮುಗಿಸಿ ಲೆಕ್ಕಪತ್ರ ಒಪ್ಪಿಸಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಹಿಂಡಲಕರ ಮಾತನಾಡಿ, ಪ್ರತಿವರ್ಷ ರಾಜ್ಯೋತ್ಸವದಂದು ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು ಅನ್ನಸಂತರ್ಪಣೆ ಜವಾಬ್ದಾರಿ ನಿಭಾಯಿಸುತ್ತಾರೆ. ಆದರೆ ತಾಲೂಕು ಆಡಳಿತ ಈ ಪೂರ್ವಭಾವಿ ಸಭೆಗೆ ಅವರನ್ನು ಆಹ್ವಾನಿಸುವ ಕನಿಷ್ಠ ಸೌಜನ್ಯ ತೋರದೇ ಸ್ವಾಮೀಜಿಗಳನ್ನು ಅವಮಾನಿಸಿದೆ ಎಂದು ದೂರಿದರು. ಸ್ವಾಮೀಜಿ ಆಹ್ವಾನಿಸದಿರುವ ಬಗ್ಗೆ ಸಭೆಗೆ ಕ್ಷಮೆ ಕೋರಿದ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾವೇ ಖುದ್ದು ಮಠಕ್ಕೆ ತೆರಳಿ ಸ್ವಾಮೀಜಿಯನ್ನು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಪ್ರತಿ ವರ್ಷದಂತೆ ಹೆಸ್ಕಾಂ ಇಲಾಖೆಗೆ ಪಟ್ಟಣದ ಪ್ರಮುಖ ವೃತ್ತಗಳ ವಿದ್ಯುತ್ ಅಲಂಕಾರ, ಪಪಂಗೆ ಸಮಾರಂಭ ಜರುಗುವ ವೇದಿಕೆ ನಿರ್ಮಾಣ ಹಾಗೂ ಪಟ್ಟಣದ ಸ್ವಚ್ಛತೆ, ಶಿಕ್ಷಣ ಇಲಾಖೆಗೆ ಮೆರವಣಿಗೆಯ ರೂಪುರೇಷೆಗಳ ಸಿದ್ಧತೆ, ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಹಾಗೂ ಮೆರವಣಿಗೆಗೆ ವಾಹನಗಳನ್ನು ಪೂರೈಸುವ ಜವಾಬ್ದಾರಿಗಳನ್ನು ನೀಡಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ರಾಜ್ಯೋತ್ಸವ ಆಚರಣೆ ಕುರಿತಂತೆ ತಮ್ಮ ಸಲಹೆ ಸೂಚನೆ ನೀಡಿದರು. ಬಳಿಕ ತಾಲೂಕು ಆಡಳಿತದ ವತಿಯಿಂದ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ತಾಪಂ ಇಒ ವಿಲಾಸರಾಜ, ಬಿಇಒ ರಾಜೇಶ್ವರಿ ಕುಡಚಿ, ಪಪಂ ಮುಖ್ಯಾಧಿಕಾರಿ ಸಂತೋಷ ಕುರಬೆಟ, ಸಮಾಜ ಕಲ್ಯಾಣ ಅಧಿಕಾರಿ ವಿ.ಆರ್ ನಾಗನೂರ, ತೋಟಗಾರಿಕೆ ಅಧಿಕಾರಿ ಕಿರಣ ಉಪಾಳೆ, ಪಶುಸಂಗೋಪನೆ ಅಧಿಕಾರಿ ಡಾ.ಕೂಡಗಿ, ಕೆಪಿಸಿಸಿ ಸದಸ್ಯ ಚಂಬಣ್ಣ ಹೊಸಮನಿ, ಮುಖಂಡರಾದ ಎನ್.ಸಿ.ತಳವಾರ, ರವಿ ಕಾಡಗಿ, ದಶರಥ ಬನೋಶಿ, ಅಪ್ಪಯ್ಯ ಕೊಡೊಳ್ಳಿ, ಗುಡ್ಡೂ ತೇಕಡಿ, ಪ್ರೇಮಾನಂದ ನಾಯ್ಕ, ಬಸವಪ್ರಭು ಹಿರೇಮಠ, ಪ್ರಕಾಶ ಮಾದಾರ, ಶಿವಾನಂದ ಕುಂದರಗಿ, ಪ್ರಕಾಶ ಬೈಲೂರಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.