ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆಗೆ ನಿರ್ಧಾರ

KannadaprabhaNewsNetwork | Published : Feb 4, 2024 1:30 AM

ಸಾರಾಂಶ

ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಪಂ ಮಟ್ಟದ ಶಾಲಾ-ಕಾಲೇಜು, ವಿವಿಧ ಕಚೇರಿಗಳಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ಸಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲಾಡಳಿತ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಜಿಲ್ಲೆಯಾದ್ಯಂತ ಫೆ.15ರಂದು ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಧ್ಯಕ್ಷತೆಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆಯುವ ಜಿಲ್ಲಾಮಟ್ಟದ ಸಂತ ಸೇವಾಲಾಲ್ ಮಹಾರಾಜರ ಜಯಂತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಹಿಸಲಾದ ಕೆಲಸ-ಕಾರ್ಯ ಅಚ್ಚುಕಟ್ಟಾಗಿ, ಯಾವುದೇ ಲೋಪ ಆಗದಂತೆ ಜವಾಬ್ದಾರಿಯಿಂದ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ, ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು, ನುರಿತ ಉಪನ್ಯಾಸಕರನ್ನು ಆಹ್ವಾನಿಸುವುದು ಸೇರಿ ಎಲ್ಲಾ ರೀತಿಯ ಸೌಕರ್ಯವನ್ನು ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬೇಕು. ಅದೇ ರೀತಿ ವೇದಿಕೆ, ಕುಡಿಯುವ ನೀರು, ವಿದ್ಯುತ್, ಅಲಂಕಾರ, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಜಯಂತಿಗೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಪಂ ಮಟ್ಟದ ಶಾಲಾ-ಕಾಲೇಜು, ವಿವಿಧ ಕಚೇರಿಗಳಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಆಯಾ ಸಂಘಟನೆಗಳಿಂದ ಏರ್ಪಡಿಸಲಾಗುವ ಮೆರವಣಿಗೆ, ಮಾರ್ಗದ ಕುರಿತು ಪೂರ್ವಭಾವಿಯಾಗಿ ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮುಖಂಡರಾದ ಬಾಸು ರಾಠೋಡ್, ತೇಜರಾಜ್ ರಾಠೋಡ್, ಪರಶುರಾಮ ಚವ್ಹಾಣ್, ವಕೀಲರಾದ ಗೋವಿಂದ ಬಿ ಜಾಧವ್, ಚಂದ್ರಶೇಖರ ಜಾಧವ್, ಮುಖಂಡ ಕಿಶನ್ ರಾಠೋಡ್ ಅಲ್ಲಿಪುರ, ದೇವರಾಜ ನಾಯ್ಕ, ನಾನು ನಾಯ್ಕ, ರಾಮುನಾಯಕ, ರವಿ ಮುದ್ನಾಳ, ವಿನೋದ್ ಕೆ ರಾಠೋಡ್, ವಿಜಯ್ ಜಾಧವ್ ಜಿನಕೇರಾ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

Share this article