ಹಾನಗಲ್ಲ: ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಹಾಗೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವುದಕ್ಕಾಗಿ ಧರ್ಮಾ ಜಲಾಶಯದಿಂದ ನಾಲ್ಕು ಹಂತದಲ್ಲಿ ನೀರು ಹರಿಸುವ ಕುರಿತು ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಧರ್ಮಾ ಜಲಾಶಯದಿಂದ ಬೇಸಿಗೆ ಬೆಳೆಗಳಿಗಾಗಿ ನೀರು ಹರಿಸುವ ಮುನ್ನ ಕಾಲುವೆ ದುರಸ್ತಿಗೊಳಿಸಬೇಕು. ಜಲಾಶಯದಿಂದ ಎಷ್ಟೇ ನೀರು ಬಿಟ್ಟರೂ ಅದು ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತ ಮುಖಂಡ ರಾಜಣ್ಣ ಗೌಳಿ ಮಾತನಾಡಿ, ಸದ್ಯ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹವಿದ್ದು, ತಾಲೂಕಿನ ಸುರಳೇಶ್ವರ ಗ್ರಾಮದ ವರೆಗೆ ಬೆಳೆಗಳಿಗೆ ಹರಿಸಬಹುದಾದ ನೀರನ್ನು ಹೊರತುಪಡಿಸಿ, ಮಾರ್ಚ್ ತಿಂಗಳಲ್ಲಿ ಒಂದೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದರೆ ಕೆರೆಗಳು ತುಂಬುವುದಲ್ಲದೇ, ಕಾಲುವೆಯ ಕೊನೆಯ ಹಳ್ಳಿಗಳಿಗೂ ತಲುಪುತ್ತದೆ ಎಂದರು.ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ರೈತ ಸಂಘದ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಮಾತನಾಡಿ, ವಾಸ್ತವ ಸಮಸ್ಯೆ ಅರಿವು ರೈತರಿಗೆ ಸಮಸ್ಯೆಯಾಗದಂತೆ ನೀರು ಹರಿಸಲು ಮನವಿ ಮಾಡಿದರು.
ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ರವಿ ಕೊರವರ, ಪುರಸಭಾ ಅಧ್ಯಕ್ಷೆ ಮಮತಾ ಆರೇಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಎಡಿಎ ಮಾರುತಿ ಅಂಗರಗಟ್ಟಿ, ನೀರಾವರಿ ಎಂಜಿನಿಯರ್ ರಾಘವೇಂದ್ರ, ಅನ್ನಪೂರ್ಣಾ ಮಣಕವಾಡ, ರೈತರಾದ ಕೊಟ್ರೇಶ ಅಂಗಡಿ, ಬಿ.ಸಿ. ಪಾಟೀಲ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಬಸವಂತ ಮೆಳ್ಳಳ್ಳಿ, ಚಂದ್ರಣ್ಣ ಗೂಳಿ, ರಾಮನಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ಶಿವಲಿಂಗಪ್ಪ ಈಶಪ್ಪನವರ, ಪರಶುರಾಮ ಕುಂಟನಹೊಸಳ್ಳಿ ಇತರರು ಉಪಸ್ಥಿತರಿದ್ದರು.