ಶೆಟ್ಟಹಳ್ಳಿ ಸಹಕಾರ ಸಂಘದ ಸುವರ್ಣಮಹೋತ್ಸವ ನಡೆಸಲು ನಿರ್ಧಾರ

KannadaprabhaNewsNetwork | Published : Sep 28, 2024 1:16 AM

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ, ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ ಹೇಳಿದರು.ಶೆಟ್ಟಹಳ್ಳಿ ಸಂಘದ ಆವರಣದಲ್ಲಿ ೨೦೨೩-೨೪ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಆರಂಭವಾಗಿ ೫೦ ವರ್ಷಗಳಾಗುತ್ತಿರುವ ಸಮಯದಲ್ಲಿ ಸಂಘದ ನೂತನ ಕಟ್ಟಡ ಲೋಕಾರ್ಪಣೆ, ಪ್ರಗತಿ ಪರ ರೈತರಿಗೆ ಸನ್ಮಾನ, ಸಂಘದ ವ್ಯಾಪ್ತಿಯ ಸಂಘದ ಸದಸ್ಯರ ಮಕ್ಕಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಸಂಘ ತೀರ್ಮಾನಿಸಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ೬.೫ ಲಕ್ಷ ನಿವ್ವಳ ಲಾಭದಲ್ಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ, ಅಪೆಕ್ಸ್‌ ಬ್ಯಾಂಕ್‌ ಹಾಗೂ ದಿ.ಎಚ್.ಎಸ್. ಮಹದೇವಪ್ರಸಾದ್‌ ಸಹಕಾರ ಸಚಿವರಾಗಿದ್ದಾಗ ನೀಡಿದ ಅನುದಾನದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣವಾಗಿದೆ ಅಲ್ಲದೆ ಸಂಘದ ಅನುದಾನ ಬಳಕೆ ಮಾಡಿಲ್ಲದಿರುವುದು ಕೂಡ ಸಂಘ ಲಾಭದಲ್ಲಿ ಇರಲು ಕಾರಣ ಎಂದರು. ರೈತರಿಗೆ ಹೊಸ ಸಾಲ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ನಮ್ಮ ಸಂಘದಲ್ಲಿ ಠೇವಣಿ ಇಟ್ಟರೆ ಹೆಚ್ಚಿನ ಬಡ್ಡಿ ನೀಡುವ ಕಾರಣದಿಂದ ಸಂಘದ ವ್ಯಾಪ್ತಿಯ ರೈತರು ಸಂಘದಲ್ಲಿ ಠೇವಣಿ ಇಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ. ರಾಜಪ್ಪ, ನಿರ್ದೇಶಕರಾದ ಮಹದೇವಪ್ಪ, ಮಹದೇವ, ರುದ್ರಸ್ವಾಮಿ, ಮರಿಶೆಟ್ಟಿ, ಎಸ್.ಬಿ.ಸ್ವಾಮಿ, ತಾಯಮ್ಮ, ಅಕ್ಕಮಹದೇವಮ್ಮ, ವೀರಭದ್ರಶೆಟ್ಟಿ, ಸಿದ್ದನಾಯಕ ಹಾಗೂ ಮುಖಂಡರಾದ ಮಂಚಹಳ್ಳಿ ಲೋಕೇಶ್‌, ಬಾಬು, ಆಲತ್ತೂರು ರಾಮಕೃಷ್ಣೇಗೌಡ, ಟಿ.ಶಾಂತೇಶ್‌, ಕೆ.ರಾಜೇಶ್‌, ಸಿದ್ದಯ್ಯನಪುರ ಸೋಮಶೇಖರ್‌, ಮಂಚಳ್ಳಿ ಹರೀಶ್‌ ಸೇರಿ ನೂರಾರು ಮಂದಿ ಸಂಘದ ಸದಸ್ಯರು ಇದ್ದರು.

Share this article