ಕನ್ನಡಪ್ರಭ ವಾರ್ತೆ ರಾಯಚೂರುಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಹಾಗೂ ಬೇಡಿಕೆ ಈಡೇರುವ ತನಕ ಯಾವುದೇ ರೀತಿಯ ಹುದ್ದೆಗಳ ಭರ್ತಿ ಮಾಡಬಾರದೆಂದು ಆಗ್ರಹಿಸಿ ಇದೇ ಅ.16 ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಸ್ಸಿ ಒಳ ಮೀಸಲಾತಿ ಜಾತಿ ಐಕ್ಯ ಹೋರಾಟ ಸಮಿತಿ ಸಂಚಾಲಕ ಎಂ. ವಿರೂಪಾಕ್ಷಿ ಎಚ್ಚರಿಸಿದರು.ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಹೋರಾಟವು ಕೊನೆ ಹಂತಕ್ಕೆ ಬಂದು ತಲುಪಿದೆ. ಸುಪ್ರೀಂ ಕೋರ್ಟ್ ಸಹ ಸರ್ಕಾರಕ್ಕೆ ಸೂಕ್ತ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು. ಅಲ್ಲಿವರೆಗೂ ಯಾವುದೇ ಹುದ್ದೆಗಳ ಭರ್ತಿಗೆ ಮುಂದಾಗುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದರು.
ಆದರೆ ಇದೀಗ 34,600 ಹುದ್ದೆಗಳ ಭರ್ತಿ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ಖಂಡನೀಯ ವಿಷಯವಾಗಿದೆ. ಇದು ದಲಿತ ಹಾಗೂ ಶೋಷಿತ ಸಮುದಾಯಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಹೊಂದಿರುವ ಬೇಜವಾಬ್ದಾರಿತಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಳ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಈಗಾಗಲೇ ಮೊದಲ ಹಂತದ ಹೋರಾಟವಾಗಿ ರಾಯಚೂರು ಬಂದ್ ನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಎರಡನೇ ಹಂತದ ಹೋರಾಟವಾಗಿ ಇದೇ 16 ಕ್ಕೆ ಎಲ್ಲ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಐಕ್ಯ ಸಮಿತಿ ಮುಖಂಡರಾದ ರವೀಂದ್ರ ಜಲ್ದಾರ್, ನರಸಪ್ಪ ದಂಡೋರಾ, ಪಿ.ಯಲ್ಲಪ್ಪ, ತಿಮ್ಮಪ್ಪ ಫಿರಂಗಿ, ಭೀಮಣ್ಣ ಮಂಚಾಲ, ಸುಭಾಶ ಅಸ್ಕಿಹಾಳ, ಶಂಶಾಲಂ, ರಾಘವೇಂದ್ರ ಬುರೆಡ್ಡಿ ಸೇರಿದಂತೆ ಅನೇಕರು ಇದ್ದರು.