ಕೊಪ್ಪಳ: ಹಿರೇಸಿಂದೋಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದ್ದಾರೆ.
ಹಿರೇಸಿಂದೋಗಿ ಗ್ರಾಮವನ್ನು ಹೋಬಳಿಯನ್ನಾಗಿ ಮಾಡಲು ಈಗಾಗಲೇ ತೀರ್ಮಾನ ಮಾಡಿದ್ದು, ಈ ಕುರಿತು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರಗೌಡ ಅವರಿಗೆ ಮನವಿ ಮಾಡಿದ್ದೇನೆ. ಸಚಿವರೂ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಇದರಿಂದ ಹಿರೇಸಿಂದೋಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಆರೋಗ್ಯ ಕೇಂದ್ರಕ್ಕೆ ಅಡಿಗಲ್ಲು: ಹಿರೇಸಿಂದೋಗಿಯಲ್ಲಿರುವ 30ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು 50 ಬೆಡ್ಡಿನ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಸಚಿವರು 50 ಬೆಡ್ಡಿನ ಅರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಕಟ್ಟಡ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.ಇಂದು ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೇನೆ,ನಾಳೆಯಿಂದಲೇ ಕಾಮಗಾರಿ ಪ್ರಾರಂಭ ಮಾಡುವಂತೆ ಏಜನ್ಸಿಯವರಿಗೆ ಸೂಚನೆ ನೀಡಿದ್ದೇನೆ ಎಂದರು.ಮೈನಳ್ಳಿ ಕ್ರಾಸ್‌ನಿಂದ ಕಂಪ್ಲಿ ಕ್ರಾಸ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿದೆ. ಕಂಪ್ಲಿ ಕ್ರಾಸ್ ನಿಂದ ಬೆಳಗಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಅದು ಕೂಡ ಈಗಾಗಲೇ 80% ಕಾಮಗಾರಿ ಮುಗಿದಿದ್ದು, ಅಳವಂಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನೂ ಬಾಕಿ ಇರುವ ಹಿರೇಸಿಂದೋಗಿಯಿಂದ ಮೈನಳ್ಳಿ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಕೊಟ್ಟಿದ್ದೇವೆ. ಕಾಮಗಾರಿ ಕೂಡ ಪ್ರಾರಂಭ ಮಾಡುತ್ತೇವೆ ಎಂದರು.