ಶಿಕ್ಷಣ ವ್ಯವಸ್ಥೆ ಬಲವರ್ಧನೆಗೆ ನಿರ್ಧಾರ

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ಚುನಾವಣೆಗೂ ಪೂರ್ವ ನೀಡಿದ್ದ ಐದು ಗ್ಯಾರಂಟಿಯಲ್ಲಿ ವ್ಯತ್ಯಾಸ ಆಗದ ಹಾಗೆ ಜನರಿಗೆ ತಲುಪಿಸಿದ್ದೇವೆ. ಬಡವರು ಕಷ್ಟದಲ್ಲಿದ್ದಾರೆ. ನೆಮ್ಮದಿಯಿಂದ ಬದುಕ ಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಕಾರವಾರ:

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಅಂಗನವಾಡಿಯಿಂದಲೇ ಶಿಕ್ಷಣದ ವ್ಯವಸ್ಥೆ ಬಲವರ್ಧನೆ ಮಾಡಬೇಕೆಂದು ಜಿಲ್ಲೆಯ ಶಾಸಕರು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲರೂ ಶಿಕ್ಷವಂತರಾದರೆ ನಾವು ಅಭಿವೃದ್ಧಿ ಮಾಡಬೇಕಿಲ್ಲ. ಅವರೆ ಅಭಿವೃದ್ಧಿ ಆಗುತ್ತಾರೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲ. ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರ ಕೂಡಾ ಹಣ ಮಂಜೂರಾತಿ ಮಾಡುತ್ತಿದೆ ಎಂದರು.

ಚುನಾವಣೆಗೂ ಪೂರ್ವ ನೀಡಿದ್ದ ಐದು ಗ್ಯಾರಂಟಿಯಲ್ಲಿ ವ್ಯತ್ಯಾಸ ಆಗದ ಹಾಗೆ ಜನರಿಗೆ ತಲುಪಿಸಿದ್ದೇವೆ. ಬಡವರು ಕಷ್ಟದಲ್ಲಿದ್ದಾರೆ. ನೆಮ್ಮದಿಯಿಂದ ಬದುಕ ಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಜನಪ್ರತಿನಿಧಿಗಳ ಜತೆ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ. ಶಕ್ತಿಯೋಜನೆಯಡಿ ₹ ೬೩ ಕೋಟಿ ವೆಚ್ಚವಾಗಿದೆ. ಗೃಹಲಕ್ಷ್ಮೀ ಯೋಜನೆ ಶೇ. ೮೮ ಜನರಿಗೆ ಮುಟ್ಟಿಸಲಾಗಿದ್ದು, ₹ ೧೦೦ ಕೋಟಿ ಜಮಾ ಆಗಿದೆ. ವಿದ್ಯುತ್ ಉಚಿತ ಯೋಜನೆಯಡಿ ಶೇ. ೭೫ ರಷ್ಟು ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಅನ್ನ ಭಾಗ್ಯ, ಮೀನುಗಾರರಿಗೆ ಬೋಟ್‌ಗಾಗಿ ಸಬ್ಸಿಡಿ ದರದಲ್ಲಿ ಡೀಸೆಲ್ ವಿತರಣೆ ಒಳಗೊಂಡು ಹಲವು ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಿಸಿದರು.ನಾಗರಿಕ, ಜಿಲ್ಲಾ ಸಶಸ್ತ್ರ, ಮಹಿಳಾ ಪೊಲೀಸ್, ಎನ್‌ಸಿಸಿ ಒಳಗೊಂಡು ವಿವಿಧ ತುಕಡಿಗಳಿಂದ ಪಥಸಂಚಲನ ನಡೆಯಿತು. ತೆರೆದ ಜೀಪಿನಲ್ಲಿ ತೆರಳಿದ ಮಂಕಾಳು ವೈದ್ಯ ಗೌರವ ವಂದನೆ ಸ್ವೀಕರಿಸಿದರು. ಅರಣ್ಯ, ಮೀನುಗಾರಿಕೆ, ನಗರಸಭೆ, ಕರ್ನಾಟಕ ಜಲಮಂಡಳಿಯಿಂದ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ, ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮಕ್ಕೂ ಪೂರ್ವ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪೊಲೀಸ್ ಪರೇಡ್ ಮೈದಾನದ ವರೆಗೆ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ನಡೆಯಿತು. ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು.

ಶಾಸಕ ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ, ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಸಿ., ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಇದ್ದರು.ಆಸ್ಪತ್ರೆಗಾಗಿ ನೃತ್ಯದಲ್ಲಿ ಬೇಡಿಕೆ

ಕನ್ನಡ ಚಲನಚಿತ್ರ ಗೀತೆಗೆ ನೃತ್ಯ ಮಾಡುವಾಗಲೇ ಉತ್ತರ ಕನ್ನಡಕ್ಕೆ ಆಸ್ಪತ್ರೆ ಬೇಕು ಎನ್ನುವ ಮಕ್ಕಳ ಕೂಗು ಸಾರ್ವಜನಿಕರಿಗೆ ಮೆಚ್ಚುಗೆಗೆ ಕಾರಣವಾಯಿತು. ಅಂಬರೀಷ ಅಭಿನಯದ ಸೊಲ್ಲಿಲ್ಲದ ಸರದಾರ ಚಲನಚಿತ್ರದ ಈ ಮಣ್ಣನ್ನು ಮರಿಬೇಡ ಪದ್ಯಕ್ಕೆ ಇಲ್ಲಿನ ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಮಕ್ಕಳು ನೃತ್ಯ ಮಾಡಿದರು. ಪದ್ಯದ ಕೊನೆಯ ಕ್ಷಣದಲ್ಲಿ ಏಳಿರಿ ಏಳಿರಿ ಈ ಪ್ರಾರ್ಥನೆಯ ಕೇಳಿರಿ ಸಾಲು ಬರುತ್ತಿದ್ದಂತೆ ನೃತ್ಯದಲ್ಲಿದ್ದ ಬಾಲಕಿ ಹೃದಯಾಘಾತವಾದಂತೆ ಕೆಳಕ್ಕೆ ಬೀಳುತ್ತಾರೆ. ವೈದ್ಯರು ಬಂದು ಮೃತಪಟ್ಟಿದ್ದಾಳೆಂದು ಮನೆಯವರಿಗೆ ತಿಳಿಸುತ್ತಾರೆ. ಇದೇ ಸಮಯಕ್ಕೆ ನೃತ್ಯದಲ್ಲಿದ್ದ ಮಕ್ಕಳು "ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ ಇದೆ " ಎನ್ನುವ ಬ್ಯಾನರ್ ಹಿಡಿಯುವ ಮೂಲಕ ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಬೇಡಿಕೆ ಇಟ್ಟರು. ನೆರೆದಿದ್ದ ಜನರೆಲ್ಲಾ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಸೂಚಿಸಿದರು. ವೇದಿಕೆಯಲ್ಲಿದ್ದ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮುಜುಗರಕ್ಕೆ ಒಳಗಾಗಬೇಕಾಯಿತು.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಸ್ಪತ್ರೆಗೆ ಪ್ರಯತ್ನ

ನಮ್ಮ ಸರ್ಕಾರ ಬಂದ ಆರು ತಿಂಗಳಿನಿಂದ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುವುದಕ್ಕಾಗಿಯೇ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಬುಧವಾರ ಕನ್ನಡ ರಾಜ್ಯೋತ್ಸವದಲ್ಲಿ ಮಕ್ಕಳು ಸುಸಜ್ಜಿತ ಆಸ್ಪತ್ರೆ ಸಂಬಂಧ ನೃತ್ಯದಲ್ಲಿ ಬೇಡಿಕೆಯಿಟ್ಟ ಕುರಿತು ಪ್ರತಿಕ್ರಿಯಿಸಿ, ಮೊದಲು ಕಾರವಾರ ವೈದ್ಯಕೀಯ ಕಾಲೇಜಿಗೆ ಟ್ರಾಮಾ ಸೆಂಟರ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕಾಗಿದೆ. ಇದರೊಂದಿಗೆ ಚುನಾವಣೆ ಮೊದಲು ಭರವಸೆ ನೀಡಿದಂತೆ ಸರ್ಕಾರ ಮಾಡದಿದ್ದಲ್ಲಿ ತಾವೇ ಸ್ವತಃ ಆಸ್ಪತ್ರೆ ನಿರ್ಮಿಸಲೂ ಸಿದ್ಧವಿದ್ದು, ಕಳೆದ ಐದು ವರ್ಷದಲ್ಲಿ ಹಾಳಾಗಿದ್ದನ್ನು ಐದು ತಿಂಗಳಲ್ಲಿ ಹೇಗೆ ಮಾಡುವುದು? ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು.

Share this article