ಯಲ್ಲಾಪುರ: ಭಾರತೀಯ ಕಿಸಾನ್ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಯೋಜನಾ ಬೈಠಕ್ ಹಾಗೂ ಸದಸ್ಯತಾ ಅಭಿಯಾನದ ಸಭೆ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಕನಕನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಮಾತನಾಡಿ, ಜಿಲ್ಲೆಯ ಸಮಸ್ಯೆಗಳ ಪಟ್ಟಿ ಮಾಡಿ ಜಿಲ್ಲಾಧಿಕಾರಿ ಗಮನಕ್ಕೆ ತರೋಣ. ಕುಮಟಾದ ಸಿಹಿ ಈರುಳ್ಳಿ ಪ್ರದೇಶದ ಭೂಕಬಳಿಕೆ, ಜೆಸಿಬಿ ಸಂಘಗಳ ಕಿರುಕುಳ, ಅರಣ್ಯ ಇಲಾಖೆಯವರ ಅವೈಜ್ಞಾನಿಕ ತಂತಿಬೇಲಿ ನಿರ್ಮಾಣ, ಕೆರೆ, ಹಳ್ಳಗಳ ಅತಿಕ್ರಮಣ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ನಾರಾಯಣ ಭಟ್ ಭಟ್ಕಳ, ಗಣಪತಿ ಪಟಗಾರ್ ಕುಮಟಾ, ಯಲ್ಲಾಪುರ ತಾಲೂಲಾಧ್ಯಕ್ಷ ವಿಘ್ನೇಶ್ವರ ಭಟ್ಟ ಮಲವಳ್ಳಿ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ರಾ. ಬಾಳೆಗದ್ದೆ, ಜಿಲ್ಲಾ ಸಮಿತಿಯ ಮಾಬ್ಲೇಶ್ವರ ಕೊಡ್ಲಗದ್ದೆ, ಧಾರವಾಡ ಜಿಲ್ಲಾ ಕಾರ್ಯದರ್ಶಿ ಗುರು, ಸ್ಥಳೀಯ ಯುವಕ ಸಂಘದ ಅಧ್ಯಕ್ಷ ಮಂಜುನಾಥ ವಿ. ಕಲ್ಲೇಶ್ವರ ಉಪಸ್ಥಿತರಿದ್ದರು. ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್ ಸ್ವಾಗತಿಸಿದರು.ಪ್ರಾಂತ ಕಾರ್ಯದರ್ಶಿ ಬಾ.ನಾ. ಮಾಧವ ಹೆಗಡೆ ಪ್ರಾಸ್ತಾವಿಕಗೈದು ನಿರ್ವಹಿಸಿದರು.
ನಿರ್ಣಯ: ರೈತರ ಸಪ್ಪಿನ ಬೆಟ್ಟವನ್ನು ಬ ಕರಾಬ ಗೊಳಿಸುವ ಕ್ರಮವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾಧಿಕಾರಿ ಅವರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕುಮಟಾ ಹಂದಿಗೋಣದಲ್ಲಿ ರೆಸಾರ್ಟ್ ಸಲುವಾಗಿ ರಾಜಕಾಲುವೆ ಮುಚ್ಚಿ ರೈತರ ಜಮೀನಿಗೆ ಹಾನಿ ಮಾಡಿದ ವ್ಯಕ್ತಿಯ ವಿರುದ್ಧ ಹೋರಾಟ ಮುಂದುವರಿಸಲು ಮತ್ತು ಸಿಹಿ ಈರುಳ್ಳಿ ಬೆಳೆಗೆ ಧಕ್ಕೆಪಡಿಸಿದ ಬಗ್ಗೆ ರೈತರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು.ಜೆಸಿಬಿ ಸಂಘಗಳನ್ನು ಮಾಡಿಕೊಂಡು ಹೊರಗಿನವರಿಗೆ ಕೆಲಸಕ್ಕೆ ತೊಂದರೆ ಕೊಟ್ಟು ರೈತರಿಗಾಗುವ ಅನ್ಯಾಯವನ್ನು ತಡೆಯುವ ಬಗ್ಗೆ ಆಯಾ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.