- - ಪ್ರತಾಪ್ ಸಿಂಹ
ಶ್ರೀರಂಗಪಟ್ಟಣ– ಕುಶಾಲನಗರ ರಾಷ್ಟ್ರೀಯ ಹೆದ್ದಾರಿ– 275ರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, 92 ಕಿ.ಮೀ ಉದ್ದದ ನಾಲ್ಕು ಪಥದ ರಸ್ತೆಯ ಜೊತೆ ಸೇವಾ ರಸ್ತೆಗಳೂ ಇರಲಿವೆ. 1,351.67 ಎಕರೆ (547 ಹೆಕ್ಟೇರ್) ಭೂಸ್ವಾಧೀನ ಪ್ರಕ್ರಿಯೆಯಲ್ಲಿ 691.89 ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 477 ಕೋಟಿ ರೂ, ಪರಿಹಾರ ನೀಡಲಾಗಿದೆ ಎಂದರು.ಉಳಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಎದುರಾಗಿರುವ ತೊಂದರೆಗಳನ್ನು ಬಗೆಹರಿಸಲಾಗುತ್ತಿದೆ. ಕೆಲವು ರೈತರ ಬಳಿ ಹಕ್ಕುಪತ್ರ, ಸಾಗುವಳಿ ಚೀಟಿ ಇಲ್ಲ. ವ್ಯಾಜ್ಯಗಳೂ ಇವೆ. ಇವುಗಳನ್ನು ಬಗೆಹರಿಸುವುದು ಸವಾಲಾಗುತ್ತಿದ್ದು, ಶೀಘ್ರ ಬಗೆಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಕಾಮಗಾರಿ ಆರಂಭವಾಗಲಿದೆ. ಕೊಡಗು ಜಿಲ್ಲೆಯಲ್ಲಿ 2.3 ಕಿ.ಮೀ ರಸ್ತೆಯಿದ್ದು, ಮೈಸೂರು ಜಿಲ್ಲೆಯಲ್ಲಿ 75.9 ಕಿಮೀ, ಮಂಡ್ಯದಲ್ಲಿ 14 ಕಿ.ಮೀ ರಸ್ತೆ ಇರಲಿದೆ. ಸಂಪಾಜೆ ನಂತರ ಮತ್ತೆ ನಾಲ್ಕು ಪಥದ ರಸ್ತೆ ಆಗಲಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, 9 ಲಕ್ಷದಿಂದ 25 ಲಕ್ಷದವರೆಗೂ ಪರಿಹಾರ ನೀಡಲಾಗಿದೆ. ಮಾಲೀಕರಿಗೆ ತಾರತಮ್ಯ ಇಲ್ಲದಂತೆ 18 ಲಕ್ಷಕ್ಕೆ ನಿಗದಿಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಕೆಎನ್ಆರ್ಕನ್ಸ್ ಟ್ರಕ್ಷನ್ ದಿಲೀಪ್ ಕುಮಾರ್ ಸಿನ್ಹಾ ಇದ್ದರು.