ವಿವಿಧ ಸಮಸ್ಯೆ ಪರಿಹಾರಕ್ಕಾಗಿ ಹೋರಾಟಕ್ಕೆ ತೀರ್ಮಾನ

KannadaprabhaNewsNetwork | Published : Jun 8, 2024 12:33 AM

ಸಾರಾಂಶ

ಆರು ತಿಂಗಳಿನ ಹಾಲಿನ ಪ್ರೋತ್ಸಾಹ ಧನ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯ

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮತ್ತು ತಾಲೂಕು ಘಟಕದ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ಸಂಘದ ಕಾರ್ಯಾಲಯದಲ್ಲಿ ನಡೆಸಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ತಿಳಿಸಿದರು.

ರೈತರಿಗೆ ಬರ ಪರಿಹಾರದ ಹಣ ಜಮಾ ಮಾಡದಿರುವುದು, ಖರೀದಿ ಕೇಂದ್ರದಲ್ಲಿ ಜೋಳ ಮಾರಾಟ ಮಾಡಿದ ರೈತರಿಗೆ ಹಣ ಜಮಾ ಮಾಡದಿರುವುದು, ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಮೈಕ್ರೋ ಫೈನಾನ್ಸ್‌ಗಳು, ಸಹಕಾರಿ ಹಣಕಾಸು ಸಂಸ್ಥೆಗಳು ರೈತರ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕುವುದು, ಮನೆ ಮುಂದೆ ಬಂದು ಗಲಾಟೆ ಮಾಡುವುದು, ಟ್ರ್ಯಾಕ್ಟರ್ ಸೀಜ್, ನೋಟಿಸ್ ನೀಡುವುದು, ಆರು ತಿಂಗಳಿನ ಹಾಲಿನ ಪ್ರೋತ್ಸಾಹ ಧನ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ವೇ ಇಲಾಖೆ, ತಾಲೂಕು ಆಡಳಿತ, ಸಹಾಯಕ ಆಯುಕ್ತರ ಕಚೇರಿ ಹಾಗೂ ಜಿಲ್ಲಾ ಭೂಮಾಪನ ಇಲಾಖೆಯಲ್ಲಿ ಸಾವಿರಾರು ರೈತರ ಕಡತಗಳು ನಾಲ್ಕೈದು ವರ್ಷಗಳಿಂದ ಪೆಂಡಿಂಗ್ ಇಟ್ಟುಕೊಂಡಿರುವುದು, ಕೃಷಿ ಇಲಾಖೆಯಲ್ಲಿ ರೈತರು ಪರಿಕರಗಳಿಗೆ ಹಣ ತುಂಬಿದರೂ ಕೂಡ ಪಿಂಕ್ಲರ್ ಟಿಲ್ಲರ್ ರೂಟವೇಟರ್ ಇನ್ನಿತರ ಉಪಕರಣ ನೀಡದಿರುವುದು ಸೇರಿ ಇನ್ನಿತರ ವಿಷಯಗಳ ಕುರಿತು ಚರ್ಚಿಸಿ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ವಾರದಿಂದ ನಿರಂತರ ಹೋರಾಟ ಮಾಡಲು ನಿರ್ಧರಿಸಲಾಯಿತು.

ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ಮಾನಯ್ಯ ಅಂಕುಶದೊಡ್ಡಿ, ಲಿಂಗಸೂರು ತಾಲೂಕು ಅಧ್ಯಕ್ಷ ವೆಂಕಟೇಶ ಕೋಠ, ಸಿಂಧನೂರು ತಾಲೂಕು ಅಧ್ಯಕ್ಷ ರಮೇಶ ಮುಕ್ಕುಂದ ಸೇರಿ ಅನೇಕರು ಇದ್ದರು.

Share this article