ಕೌಟುಂಬಿಕ ಹಗ್ಗ ಜಗ್ಗಾಟಕ್ಕೆ ಕಾಟನ್‌ ಟಗ್‌ ಬಳಕೆಗೆ ನಿರ್ಧಾರ

KannadaprabhaNewsNetwork |  
Published : Nov 23, 2024, 12:32 AM IST
ಚಿತ್ರ : 22ಎಂಡಿಕೆ2 : ಕೊಡವ ಟಗ್ ಆಫ್ ಅಕಾಡೆಮಿಯ ಸಭೆ ನಡೆಯಿತು.  | Kannada Prabha

ಸಾರಾಂಶ

ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಕೊಡವ ಟಗ್ ಆಫ್ ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪೈಕಿ ಸ್ಪರ್ಧೆಗೆ ಹತ್ತಿಯ ದಾರಗಳಿಂದ ಮಾಡಿದ ಕಾಟನ್ ಹಗ್ಗ ಬಳಸುವ ತೀರ್ಮಾನ ಮುಖ್ಯವಾದುದು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಕೊಡವ ಟಗ್ ಆಫ್ ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗೋಣಿಕೊಪ್ಪದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು.ಈ ಪೈಕಿ ಸ್ಪರ್ಧೆಗೆ ಹತ್ತಿಯ ದಾರಗಳಿಂದ ಮಾಡಿದ ಕಾಟನ್ ಹಗ್ಗ ಬಳಸುವ ತೀರ್ಮಾನ ಮುಖ್ಯವಾದುದು.

2022ರಲ್ಲಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಕನಸಿನ ಕೂಸು ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬ ಆರಂಭವಾಯಿತು. ಪ್ರಥಮ ವರ್ಷದ ಹಬ್ಬವನ್ನು ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬ ಯಶಸ್ವಿಯಾಗಿ ನಡೆಸಿತು. ಎರಡನೆ ವರ್ಷದ 2023ರಲ್ಲಿ ಟಿ.ಶೆಟ್ಟಿಗೇರಿಯ ಶಾಲಾ ಮೈದಾನದಲ್ಲಿ ಚೆಟ್ಟಂಗಡ ಕುಟುಂಬಸ್ಥರು ಪುರುಷ ಹಾಗೂ ಮಹಿಳೆಯರ ಪ್ರತ್ಯೆಕ ವಿಭಾಗದಲ್ಲಿ 171 ಕುಟುಂಬ ತಂಡದ ನಡುವೆ ಅಂತರರಾಷ್ಟ್ರೀಯ ಮಟ್ಟದಂತೆ ಹಬ್ಬವನ್ನು ನಡೆಸಿತು.

2024 ಏಪ್ರಿಲ್‌ನಲ್ಲಿ ಬೊಟ್ಟೋಳಂಡ ಕುಟುಂಬಸ್ಥರು 230 ಕೊಡವ ಕುಟುಂಬ ತಂಡಗಳ ನಡುವೆ ಹಗ್ಗ ಜಗ್ಗಾಟವನ್ನು ಹಬ್ಬದ ರೀತಿಯಲ್ಲಿ ನಾಪೋಕ್ಲು ಶಾಲಾ ಮೈದಾನದಲ್ಲಿ ನಡೆಸಿತು. 2025 ರ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬವನ್ನು ಅರಮೇರಿಯಲ್ಲಿ ನಡೆಸಲು ಬಾಳೆಕುಟ್ಟಿರ ಕುಟುಂಬಸ್ಥರಿಗೆ ಕೊಡವ ಟಗ್ ಆಫ್ ಅಕಾಡೆಮಿ ಒಪ್ಪಿಗೆ ನೀಡಿದೆ. ಈ ಹಬ್ಬದ ಪೂರ್ವಬಾವಿಯಾಗಿ ಅಕಾಡೆಮಿಯ ಸಭೆ ನಡೆದಿದೆ.

ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬದಲ್ಲಿ ಎಲ್ಲಾ ಕೊಡವ ಕುಟುಂಬಗಳು ಪಾಲ್ಗೊಳ್ಳುವಂತೆ ಮಾಡಲು ಸ್ಪರ್ಧೆಯ ಕೆಲವು ಕಠಿಣ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಲಾಗುವುದು.

ತೆಂಗಿನ ನಾರಿನಿಂದ ತಯಾರಿಸುವ ಚೂಡಿ ಹಗ್ಗದ ಬದಲಾಗಿ ಅಂತಾರಾಷ್ಟ್ರೀಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಳಸುವ ಹತ್ತಿಯ ದಾರಗಳಿಂದ ಮಾಡಿದ ಕಾಟನ್ ಹಗ್ಗ ಬಳಸುವ ತೀರ್ಮಾನ ಕೈಗೊಂಡಿದೆ.

ಈ ಹಗ್ಗ ಹೆಚ್ಚಿನ ಬೆಲೆಯುಳ್ಳದ್ದಾದರೂ ಸ್ಪರ್ಧೆಯಲ್ಲಿ ಭಾಗವಹಿಸುವವರ ಕೈಗಳಿಗೆ ಚೂಡಿ ಹಗ್ಗದಿಂದಾಗುವ ರೀತಿಯಲ್ಲಿ ನೋವುಂಟಾಗುವುದಿಲ್ಲ. ಈ ತೀರ್ಮಾನದಿಂದ ಕೈ ಉರಿಯಾಗುತ್ತದೆಂಬ ಕಾರಣದಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುವವರ ಸಂಖ್ಯೆ ಕಡಿಮೆಯಾಗಲಿದ್ದು ಹೆಚ್ಚು ಸ್ಪರ್ಧಿಗಳು ಆಸಕ್ತಿಯಿಂದ ಭಾಗವಹಿಸುವಂತಾಗುತ್ತದೆ. ಇದರಿಂದ ಹಬ್ಬದಲ್ಲಿ ಭಾಗವಹಿಸುವ ಕೊಡವ ಕುಟುಂಬಗಳ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಕೆಲವೇ ದಿನಗಳಲ್ಲಿ ಅಕಾಡೆಮಿಯ ತಾಂತ್ರಿಕ ಸಮಿತಿಯು ಮೈದಾನ ವೀಕ್ಷಣೆ ಮಾಡಿ ದಿನಾಂಕ ನಿಗದಿ ಬಗ್ಗೆ ಬಾಳೆಕುಟ್ಟಿರ ಕುಟುಂಬದವರೊಂದಿಗೆ ಸಭೆ ನಡೆಸಿ ಚರ್ಚಿಸುವಂತೆ ನಿರ್ಧರಿಸಲಾಯಿತು.

ಬಾಳೆಕುಟ್ಟಿರ ಕಪ್ ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಸೃಷ್ಟಿಸುವ ಸಲುವಾಗಿ ಬಾಳೆಕುಟ್ಟಿರ ಕುಟುಂಬಕ್ಕೆ ಕೊಡವ ಟಗ್ ಆಫ್ ವಾರ್ ಅಕಾಡೆಮಿ ಎಲ್ಲಾ ರೀತಿಯ ಸಹಕಾರ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಕಾಡೆಮಿ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಉಳುವಂಗಡ ಲೋಹಿತ್ ಭೀಮಯ್ಯ, ಖಜಾಂಚಿ ಜಮ್ಮಡ ಗಿಲ್, ನಿರ್ದೇಶಕರಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲೇ ಜಿಲ್ಲಾ ಕಸಾಪ ಸಾಕಷ್ಟು ಹೆಸರು ಮಾಡಿದೆ: ವಿ.ಹರ್ಷ ಪಟ್ಟೇದೊಡ್ಡಿ
ಶಾಲಾ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಭಾಗ: ಕೆ.ಎಂ.ಉದಯ್