ವಾಣಿಜ್ಯ ಬಂದರು ವಿರೋಧಿಸಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

KannadaprabhaNewsNetwork |  
Published : May 03, 2024, 01:00 AM IST
ಪತ್ರಿಕಾಗೋಷ್ಠಿಯಲ್ಲಿ ಮೀನುಗಾರು ಆಶ್ರಯ ಯೋಜನೆ ಸಂಬಂಧಿತ ದಾಖಲಾತಿ ಪ್ರದರ್ಶಿಸಿರುವುದು | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಮಾತ್ರ ಮತದಾನ ಬಹಿಷ್ಕಾರ ವಾಪಸ್ ಪಡೆಯುತ್ತೇವೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಹೊನ್ನಾವರ: ಕಾಸರಕೋಡು- ಟೊಂಕಾ ವಾಣಿಜ್ಯ ಬಂದರು ವಿರೋಧಿಸಿ ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನೀಡಿರುವ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕಾಸರಕೋಡು- ಟೊಂಕಾ ಗ್ರಾಮದ ಮೀನುಗಾರರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಸಭೆ ಸೇರಿ ತೀರ್ಮಾನಿಸಿದ್ದೇವೆ ಎಂದು ಕಾಸರಕೋಡು- ಟೊಂಕಾದ ಮೀನುಗಾರರ ವಿವಿಧ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ತಾಂಡೇಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದತ್ತ ನಮ್ಮಮೂಲಭೂತ ಹಕ್ಕುಗಳನ್ನು ಸರ್ಕಾರಗಳು ನಮ್ಮಿಂದ ಕಸಿದುಕೊಳ್ಳುತ್ತಿರುವಾಗ ಮತ್ತು ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಮ್ಮ ಸಹಾಯಕ್ಕೆ ಬರದಿರುವಾಗ ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿ ಮೀನುಗಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು. ತೀವ್ರ ವಿರೋಧದ ನಡುವೆಯೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಕಲಂ 144ರಂತೆ ನಿಷೇಧಾಜ್ಞೆ ವಿಧಿಸಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಕಡಲತೀರದಲ್ಲಿ ನಿಯಮ ಬಾಹಿರವಾಗಿ ರಸ್ತೆ ನಿರ್ಮಾಣಕ್ಕೆ ಖಾಸಗಿಯವರಿಗೆ ಅವಕಾಶ ಮಾಡಿಕೊಟ್ಟಿರುವ ಜಿಲ್ಲಾ ಆಡಳಿತದ ಬಲವಂತದ ಕ್ರಮವನ್ನು ಇಲ್ಲಿನ ಮೀನುಗಾರರು ಖಂಡಿಸಿದ ನಂತರ ದೇಶಪಾಂಡೆಯವರು ಮಧ್ಯಪ್ರವೇಶ ಮಾಡಿದ್ದರಿಂದ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದಕ್ಕಾಗಿ ದೇಶಪಾಂಡೆಯವರಿಗೆ ನಮ್ಮನಿಯೋಗ ಕೃತಜ್ಞತೆ ಸಲ್ಲಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಮ್ಜಾಹಸನ್ ಸಾಬ್, ಹಮ್ಜಾಇಸ್ಮಾಯಿಲ್ ಸಾಬ್, ರಜಾಕ ಇಸ್ಮಾಯಿಲ್ ಸಾಬ್, ಗಜಾನನ ತಾಂಡೇಲ, ರಮೇಶ ತಾಂಡೇಲ, ನಾರಾಯಣ ಮೇಸ್ತ, ಅನ್ಸಾರ್ ಅಬ್ದುಲ್ ಸಾಬ್, ಶೇಕುಂಜೆ ಅಬ್ದುಲ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಸ್ಪಂದನೆ ಸಿಕ್ಕರೆ ಮತದಾನ ಬಹಿಷ್ಕಾರ ಇಲ್ಲ

ಜಿಲ್ಲೆಯ ಮೀನುಗಾರ ಪ್ರಮುಖರ ಜಂಟಿ ನಿಯೋಗವು ಮೇ 3ರಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಕುಮಟಾದಲ್ಲಿ ಭೇಟಿ ಮಾಡಿ ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನ ಸೆಳೆಯುತ್ತೇವೆ. ಸಿಎಂ ಸಿದ್ದರಾಮಯ್ಯನವರು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಮಾತ್ರ ಮತದಾನ ಬಹಿಷ್ಕಾರ ವಾಪಸ್ ಪಡೆಯುತ್ತೇವೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ