ಬರಗಾಲ ಘೋಷಿಸಿ ಮಧ್ಯಂತರ ಪರಿಹಾರ ನೀಡಲು ಒತ್ತಾಯ

KannadaprabhaNewsNetwork |  
Published : Aug 08, 2026, 02:15 AM IST
ಬ್ಯಾಡಗಿ ತಾಲೂಕಿನ ಅಳಲಗೇರಿ ಹಾಗೂ ಕಲ್ಲೇದೇವರು ಗ್ರಾಮಗಳ ಗೋವಿನಜೋಳ ಜಮೀನುಗಳಿಗೆ ಭೇಟಿ ನೀಡಿದ ಸಚಿವ ರುದ್ರಪ್ಪ ಲಮಾಣಿ ಅವರು ರೈತರೊಂದಿಗೆ ಬೆಳೆ ಪರಿಸ್ಥಿತಿ ಕುರಿತು ಪರಿಶೀಲಿಸಿದರು. | Kannada Prabha

ಸಾರಾಂಶ

ಮಳೆ ಕೊರತೆಯಿಂದ ಬೆಳೆಗಳು ಒಣಗಿ, ಇಳುವರಿಯಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬರಗಾಲ ಘೋಷಣೆ ಮಾಡಿ ರೈತರಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತರು ಸಚಿವ ರುದ್ರಪ್ಪ ಲಮಾಣಿ ಅವರನ್ನು ಒತ್ತಾಯಿಸಿದರು.

ಹಾವೇರಿ: ಮಳೆ ಕೊರತೆಯಿಂದ ಬೆಳೆಗಳು ಒಣಗಿ, ಇಳುವರಿಯಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬರಗಾಲ ಘೋಷಣೆ ಮಾಡಿ ರೈತರಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತರು ಸಚಿವ ರುದ್ರಪ್ಪ ಲಮಾಣಿ ಅವರನ್ನು ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆ ಶುಕ್ರವಾರ ಬರ ಪರಿಸ್ಥಿತಿ ವೀಕ್ಷಿಸಿದ ಸಚಿವ ರುದ್ರಪ್ಪ ಲಮಾಣಿ ಅವರು, ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು. ಬ್ಯಾಡಗಿ ತಾಲೂಕಿನ ಅಳಲಗೇರಿ ಹಾಗೂ ಕಲ್ಲೇದೇವರು ಗ್ರಾಮಗಳಲ್ಲಿ ಗೋವಿನಜೋಳ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ರೈತರೊಂದಿಗೆ ಬೆಳೆ ಪರಿಸ್ಥಿತಿ ಕುರಿತು ಚರ್ಚಿಸಿದರು.

ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ತೋಡಿಕೊಂಡರು. ಗೋವಿನಜೋಳ, ಸೋಯಾಬೀನ್, ಶೇಂಗಾ ಸೇರಿದಂತೆ ಹಲವು ಬೆಳೆಗಳು ನಿರೀಕ್ಷಿತ ಇಳುವರಿ ನೀಡುತ್ತಿಲ್ಲ. ಮಳೆ ಆಗಾಗ ಬರುತ್ತಿದ್ದರೂ ಜೂನ್ ತಿಂಗಳಲ್ಲಿ ಮಳೆ ಕೊರತೆಯಾಗಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ಆರಂಭಿಕ ಹಂತದಲ್ಲಿ ಅಗತ್ಯ ನೀರು ದೊರೆಯಲಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ಹೊಲಗಳಲ್ಲಿ ಗಿಡಗಳು ಹಚ್ಚಹಸಿರಾಗಿ ಕಾಣಿಸುತ್ತಿವೆ. ಆದರೆ ಬೆಳೆಗಳಲ್ಲಿ ನಿರೀಕ್ಷಿತ ಇಳುವರಿ ಬರುತ್ತಿಲ್ಲ. ತೆನೆಗಳು ಕೂಡ ಸರಿಯಾಗಿ ಬಂದಿಲ್ಲ. ಹೀಗಾಗಿ ಬೆಳೆ ಬೆಳೆದರೂ ಕೈಗೆ ಆದಾಯ ಸಿಗದಂತಾಗಿದೆ. ಈಗಾಗಲೇ ಬಿತ್ತನೆ, ಗೊಬ್ಬರ, ಔಷಧಿ ಸೇರಿದಂತೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಬೆಳೆ ಕೈಕೊಟ್ಟಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಸಚಿವರ ಗಮನಕ್ಕೆ ತಂದರು.

ಮಳೆ ಕೊರತೆಯಿಂದ ಬೆಳೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬೆಳೆ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಮಧ್ಯಂತರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಇದೇ ವೇಳೆ ಯೂರಿಯಾ ಗೊಬ್ಬರದ ಕೊರತೆ ಬಗ್ಗೆಯೂ ರೈತರು ಸಚಿವರ ಗಮನ ಸೆಳೆದರು. ಬೆಳೆಗಳಿಗೆ ಅಗತ್ಯವಿರುವ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ಗೊಬ್ಬರ ಲಭ್ಯವಾಗದಿದ್ದರೆ ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಪೂರೈಕೆ ಮಾಡುವಂತೆ ಮನವಿ ಮಾಡಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯವಿರುವ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ರೈತರು ಒತ್ತಾಯಿಸಿದರು.

ರೈತರ ಅಹವಾಲುಗಳನ್ನು ಆಲಿಸಿದ ಸಚಿವ ರುದ್ರಪ್ಪ ಲಮಾಣಿ ಅವರು, ಬೆಳೆ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರೇಕೆರೂರು ತಾಲೂಕು ವಿವಿಧ ಗ್ರಾಮಗಳ ಕೆರೆ ವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್‌ಕುಮಾರ, ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಬರ ಘೋಷಣೆಗೆ ರೈತರ ಆಗ್ರಹ: ಬ್ಯಾಡಗಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆಗಾಗ್ಗೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಈಗಾಗಲೇ ಬಿತ್ತನೆ ಮಾಡಿರುವ ಗೋವಿನಜೋಳ ಬೆಳೆ ಸಮರ್ಪಕವಾಗಿ ಬೆಳೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಳೆ ಇಳುವರಿ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ ಎಂದು ರೈತರು ಸಚಿವರಿಗೆ ತಿಳಿಸಿದರು.

ಮಳೆ ಕೊರತೆಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳೆಗಳ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ ಹಸಿ ಬರ ಘೋಷಣೆ ಮಾಡುವಂತೆ ರೈತರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ