ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಸುಸಜ್ಜಿತ ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳ ದುರಸ್ತಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಹರ ಘಟಕದ ಸದಸ್ಯರು ಶುಕ್ರವಾರ ನಗರಸಭೆ ಪೌರಾಯುಕ್ತ ಕಾಂತರಾಜು ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಗೌರವಾಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಜಿಲ್ಲೆಯ ಹೆಮ್ಮೆಯಾಗಿದ್ದು, ಅವರ ಹೆಸರಿನ ವೃತ್ತವನ್ನು ಸಂಪೂರ್ಣವಾಗಿ ನವೀಕರಿಸಿ ಅಭಿವೃದ್ಧಿಪಡಿಸಬೇಕು. ಎಲ್‌ಬಿಎಸ್ ತರಕಾರಿ ಮಾರುಕಟ್ಟೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮೂರ್ತಿ ಸ್ಥಾಪಿಸಬೇಕು. ನಗರಸಭೆ ವ್ಯಾಪ್ತಿಯ ಬೋರ್‌ವೆಲ್ ಬಾಕ್ಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬೀದಿ ದೀಪಗಳು ನಿಗದಿತ ಸಮಯಕ್ಕೆ ಚಾಲನೆ ಮತ್ತು ಸ್ಥಗಿತಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. ನಗರದ ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡಿ, ಸುಗಮವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಮಾತನಾಡಿ, ರೈತಾಪಿ ಜನರು ನಗರಕ್ಕೆ ಆಗಮಿಸಿದಾಗ ಶೌಚಾಲಯದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ನಾಗೇಂದ್ರನಮಟ್ಟಿಗೆ ತೆರಳುವ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದರು.ತಾಲೂಕು ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಮುಂದಿನ ತಿಂಗಳು ಗಣೇಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ, ರಸ್ತೆ ದುರಸ್ತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಾವೇರಿ ನಗರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.