ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗಣನೀಯ ಮಳೆಯಾಗದಿದ್ದರೂ ಜಿಲ್ಲೆಯ ಪ್ರಮುಖ ನದಿಗಳಾದ ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿರುವ ದೃಶ್ಯ ಜನರಲ್ಲಿ ಸಂತಸ ಮೂಡಿಸಿದೆ.
ಮುಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿಯಿಂದ ಕಂಗೆಟ್ಟಿದ್ದ ರೈತರಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ. ನದಿಗಳ ಹರಿವು ಹೆಚ್ಚಿದರೆ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ಕೆರೆ-ಕಟ್ಟೆಗಳಿಗೂ ನೀರು ಸೇರುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಜಲಾವೃತಗೊಂಡಿದ್ದ ಕಳಸೂರು ಸೇತುವೆ ಗುರುವಾರ ಸಂಚಾರಕ್ಕೆ ತೆರವಾಗಿದೆ. ತುಂಗಭದ್ರಾ ನದಿಯ ನೀರಿನ ಮಟ್ಟ ಏರಿದ್ದರಿಂದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಮುಳುಗಿದೆ. ಇದು ಜಿಲ್ಲೆಯಲ್ಲಿ ಬರಿದಾಗಿರುವ ಕೆರೆಗಳನ್ನು ಭರ್ತಿ ಮಾಡಲು ಸಕಾಲವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕಿದೆ.
ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಜನರು ಸೇತುವೆಗಳು ಮತ್ತು ನದಿ ತೀರಗಳಿಗೆ ಆಗಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.ಆದರೆ ನದಿಗಳಲ್ಲಿ ಹರಿವು ಹೆಚ್ಚಿರುವ ಕಾರಣ ಜನರು ಅನಗತ್ಯವಾಗಿ ನೀರಿಗೆ ಇಳಿಯದಂತೆ ಹಾಗೂ ಸೇತುವೆಗಳ ಮೇಲೆ ಅಪಾಯಕಾರಿಯಾಗಿ ನಿಂತು ಛಾಯಾಚಿತ್ರ ಅಥವಾ ಸೆಲ್ಫಿ ತೆಗೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಪೋಷಕರು ಮಕ್ಕಳ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವೂ ಇದೆ.
ಕಳೆದ ಕೆಲ ದಿನಗಳಿಂದ ಸುರಿದ ಮಳೆ ಹಾಗೂ ಕೆರೆ ವ್ಯಾಪ್ತಿಯಲ್ಲಿ ಹರಿದು ಬಂದ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹರಿಯುತ್ತಿದೆ. ನೀರು ರಭಸವಾಗಿ ಹರಿಯುವ ಜಲವೈಭವದ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.