ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ: ಸಚಿವ ಬಿ. ನಾಗೇಂದ್ರ

KannadaprabhaNewsNetwork |  
Published : Aug 08, 2026, 02:15 AM IST
cxc | Kannada Prabha

ಸಾರಾಂಶ

ಸಚಿವ ಬಿ. ನಾಗೇಂದ್ರ ಅವರು ಸ್ಥಳೀಯ ಶಾಸಕರಾದ ಅನ್ನಪೂರ್ಣಾ ಈ. ತುಕಾರಾಂ ಹಾಗೂ ಜಿಲ್ಲಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು.

ಸಂಡೂರು: ಸಚಿವ ಬಿ. ನಾಗೇಂದ್ರ ಅವರು ಸ್ಥಳೀಯ ಶಾಸಕರಾದ ಅನ್ನಪೂರ್ಣಾ ಈ. ತುಕಾರಾಂ ಹಾಗೂ ಜಿಲ್ಲಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು

ಸಚಿವರು ಈ ಸಂದರ್ಭದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯಂತೆ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಲಿದ್ದು, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಂಪುಟ ಸಭೆಯ ತೀರ್ಮಾನ ಮತ್ತು ಮುಖ್ಯಮಂತ್ರಿ ಆದೇಶದಂತೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

ಬಳ್ಳಾರಿಗೆ ಹೋಲಿಸಿದರೆ ಸಂಡೂರು ತಾಲೂಕಿನಲ್ಲಿ ಮಳೆಯಾಶ್ರಿತ ಸಣ್ಣ ಮತ್ತು ಅತಿಸಣ್ಣ ರೈತರೇ ಹೆಚ್ಚಾಗಿದ್ದು, ಬರ ಪರಿಸ್ಥಿತಿ ತೀವ್ರವಾಗಿದೆ. ಸಣ್ಣ ಹಿಡುವಳಿದಾರರಿಗೆ ಕೃಷಿ ನಷ್ಟದಿಂದ ಬದುಕು ಸಾಗಿಸುವುದು ಕಷ್ಟವಾಗಿದೆ. ಈ ಕುರಿತು ಶೀಘ್ರವೇ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಹಾಗೂ ಮುಂಬರುವ ಸಭೆಯಲ್ಲಿ ಪರಿಹಾರ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಲಿನ್ಯ ತಡೆಗೆ ಕ್ರಮ:ತಾಲೂಕಿನ ವ್ಯಾಪ್ತಿಯ ಕೈಗಾರಿಕೆಗಳಿಂದ ಧೂಳು ಹೆಚ್ಚಾಗುತ್ತಿದ್ದು, ಕೆರೆಗಳಿಗೆ ಕಲುಷಿತ ನೀರು ಬಿಡಲಾಗುತ್ತಿದೆ. ಇದರಿಂದ ಮೀನುಗಳು ಸಾಯುತ್ತಿದ್ದು, ನೀರು ಕುಡಿದ ಜನರಿಗೆ ಮೂಳೆ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕರೆಯಿಸಿ, ಶೀಘ್ರವೆ ಸಭೆ ನಡೆಸಲಾಗುವುದು. ಕೈಗಾರಿಕೆಗಳು ವೈಜ್ಞಾನಿಕವಾಗಿ ಫಿಲ್ಟರ್‌ಗಳನ್ನ ಅಳವಡಿಸಿ, ಮಾಲಿನ್ಯ ನಿಯಂತ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಕುರೆಕುಪ್ಪ ಮತ್ತು ದರೋಜಿ ಭಾಗಗಳಲ್ಲಿ ಹರಿಯುವ ತ್ಯಾಜ್ಯ ನೀರು ಕೆರೆ ಕೊಳ್ಳಗಳಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿರುವುದರ ಕುರಿತು ಶಾಸಕರು ಹಾಗೂ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಾಲಿನ್ಯದಿಂದ ಬೆಳೆ ನಷ್ಟವಾಗುತ್ತಿದೆ. ನೀರು ಕಲುಷಿತವಾಗುವುದನ್ನು ತಡೆಯಲು ಎಸ್‌ಟಿಪಿ ಘಟಕವನ್ನು ಸ್ಥಾಪಿಸಲಾಗುವುದು. ಇದರಿಂದ ಅರ್ಧದಷ್ಟು ಮಾಲಿನ್ಯದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ತುಂಗಾಭದ್ರಾ ಜಲಾಶಯ 80 ಟಿಎಂಸಿ ತಲುಪಿದ ನಂತರವೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಸಲಹಾ ಸಮಿತಿಯ ಅಧ್ಯಕ್ಷರ ನೇಮಕವಾದ ತಕ್ಷಣವೇ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕೃತ ಮತ್ತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಸಕಿ ಅನ್ನಪೂರ್ಣ ಈ. ತುಕಾರಾಂ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ತೀವ್ರ ಮಳೆ ಅಭಾವ ಎದುರಾಗಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ ಈ ಬಾರಿ ಶೇ. 67ರಷ್ಟು ಮಳೆ ಕೊರತೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಮುಂಗಾರು ಮಳೆ ತಡವಾಗಿ ಬಂದಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣವಾಗಿ ಕೈಗೆ ಸಿಗದಂತಾಗಿವೆ. ಕೇವಲ ರೈತರಷ್ಟೆ ಅಲ್ಲದೆ, ದನ ಕರುಗಳಿಗೂ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಎದುರಾಗಿದೆ. ತಾಲೂಕಿನ ನೈಜ ಪರಿಸ್ಥಿತಿಯ ಕುರಿತು ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಹಾರ ಘೋಷಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಮೇವಿನ ಬ್ಯಾಂಕ್ ಸ್ಥಾಪನೆ:

ತಾಲೂಕಿನ ವಿಠಲಾಪುರ, ಗಂಗಲಾಪುರ ಸೇರಿದಂತೆ 21 ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 9000 ಜಾನುವಾರುಗಳಿವೆ. ತಾಲೂಕು ಮಟ್ಟದಲ್ಲಿ 44292 ಜಾನುವಾರುಗಳಿವೆ. ಪ್ರಸ್ತುತ ಲಭ್ಯವಿರುವ ಒಣ ಮೇವಿನ ದಾಸ್ತಾನು ಮುಂದಿನ ಒಂದು ತಿಂಗಳ ಕಾಲ ನಿರ್ವಹಣೆಗೆ ಸಾಕಾಗುತ್ತದೆ. ಮೇವಿನ ಅಭಾವವಿರುವ ವಿಠಲಾಪುರ ಹಾಗೂ ಮೆಟ್ರಿಕಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾಧಿಕಾರಿ ಕೆ. ನಾಗೇಂದ್ರಪ್ರಸಾದ್, ಜಿಲ್ಲಾ ಪಂಚಾಯ್ತಿ ಸಿಸಿಒ ಮಹಮ್ಮದ್ ಹ್ಯಾರಿಸ್ ಸುಮೇರ್, ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ, ಜಂಟಿ ಕೃಷಿ ನಿರ್ದೇಶಕ ಕೆ. ಸೋಮಸುಂದರ್, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ ಸೇರಿದಂತೆ ತೋಟಗಾರಿಕೆ, ಪಸುಸಂಗೋಪನಾ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಿಂಧಿಗೇರಿ ಗ್ರಾಮದಲ್ಲಿ ಬರ ಪರಿಶೀಲನೆ

ಕುರುಗೋಡು: ನೀರಿಲ್ಲದೆ ಬೆಳೆ ಒಣಗುವ ಜತೆಗೆ ಪೋಷಕಾಂಶ ಕೊರತೆಯಿಂದ ರೋಗಕ್ಕೆ ತುತ್ತಾಗುತ್ತಿವೆ. ನಾಲೆಗೆ ನೀರು ಹರಿಸಿದರೂ ತಲುಪುವುದಿಲ್ಲ ಎಂದು ಶುಕ್ರವಾರ ಬರ ವೀಕ್ಷಣೆಗೆ ಆಗಮಿಸಿದ್ದ ಸಚಿವ ಬಿ. ನಾಗೇಂದ್ರ ಬಳಿ ರೈತರು ತಮ್ಮ ಅಳಲು ತೋಡಿಕೊಂಡರು.ತಾಲೂಕಿನ ಸಿಂಧಿಗೇರಿ ಗ್ರಾಮದ ರೈತ ದೇವೇಂದ್ರಪ್ಪ ಮತ್ತು ರೈತ ಗಾದಿಲಿಂಗಪ್ಪ ಅವರ ಜಮೀನುಗಳಿಗೆ ಭೇಟಿ ನೀಡಿ ಮಳೆಯಿಲ್ಲದೆ ಒಣಗಿರುವ ಹತ್ತಿ ಮತ್ತು ತೊಗರಿ ಬೆಳೆ ವೀಕ್ಷಿಸಿದರು.ಬಳ್ಳಾರಿ ಮತ್ತು ಸಂಡೂರು ತಾಲೂಕುಗಳಿಗೆ ಭೇಟಿ ನೀಡಿದ ಸಂರ್ದಭದಲ್ಲಿ ಇದೇ ಪರಿಸ್ಥಿತಿ ಕಂಡುಬಂದಿದೆ. ಕುರುಗೋಡು ತಾಲ್ಲೂಕಿನಲ್ಲಿ ಶೇ 3ರಷ್ಟು ಮಾತ್ರ ಬಿತ್ತನೆಯಾಗಿದೆ. ತಾಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಭೂಮಿಯ ಪೈಕೆ ಕೇವಲ 505 ಹೆಕ್ಟೇರ್ ಭೂಮಿಯಲ್ಲಿ ಬೆಳೆದಿರುವ ತೊಗರಿ, ಸಜ್ಜೆ, ಔಡಲ, ಸೂರ್ಯಕಾಂತಿ, ಹತ್ತಿ, ಮೆಕ್ಕಜೋಳ ಬೆಳೆ ನಷ್ಟವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಸಚಿವರಿಗೆ ಮಾಹಿತಿ ನೀಡಿದರು. ನಷ್ಟ ಹೊಂದಿದೆ ಎಲ್ಲ ರೈತರ ಮಾಹಿತಿ ನೀಡಿ ಅವರಿಗೆ ಪರಿಹಾರ ದೊರಕಿಸಿಕೊಡಿಸಬೇಕು ಎಂದು ಸಚಿವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಾಲೆಗೆ ನೀರು ಬಂದಾಗ ಬಿಳಿ ಜೋಳ ಬಿತ್ತನೆ ಮಾಡಬೇಕು. ಆದರೆ, ಕುಡುತಿನಿ ಬಳಿಯ ಡಿ7 ಉಪಕಾಲುವೆಯಿಂದ ಹರಿಸುವ ನೀರು ಸುಮಾರು 37 ಕೀ.ಮಿ ದೂರದ ಗ್ರಾಮಕ್ಕೆ ತಲುಪುತ್ತಿಲ್ಲ. 500 ಕ್ಯೂಸೆಕ್ ಬದಲು ನಾಲೆಗೆ ಕೇವಲ 290 ಕ್ಯೂಸೆಕ್ ಮಾತ್ರ ಬಿಡುವುದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. 500 ಕ್ಯೂಸೆಕ್ ನೀರು ಹರಿಸಿದರೆ ಮಾತ್ರ ಸಿಂಧಿಗೇರಿ ಗ್ರಾಮದ ರೈತರಿಗೆ ನೀರು ದೊರೆಯುತ್ತದೆ. ಕಾಲುವೆಗೆ ಸಮರ್ಪಕ ನೀರು ಪೂರೈಸಬೇಕು ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ರೈತ ಲಕ್ಷ್ಮಣ ನಾಯಕ ಸಿಂದಗೇರಿ ಮತ್ತು ಗಾದಿಲಿಂಗಪ್ಪ ಸಚಿವರ ಮುಂದೆ ಅಳಲು ತೋಡಿಕೊಂಡರು. ಅಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರುಜೆ.ಎನ್. ಗಣೇಶ್ ಗೈರು

ಬರ ವೀಕ್ಷಣೆಗೆ ಸಚಿವರಿಗೆ ಸಾಥ್ ನೀಡಬೇಕಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಬೆಂಬಲಿಸುವ ಮಾತಾಡಿದ್ದ ಶಾಸಕ ಜೆ.ಎನ್. ಗಣೇಶ್ ಸಚಿವ ಸ್ಥಾನಕ್ಕಾಗಿ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದರು. ಆದರೆ, ಕೇಂದ್ರ ನಾಯಕರು ಬಿ. ನಾಗೇಂದ್ರಗೆ ಮಣೆ ಹಾಕಿದ್ದರಿಂದ ಕ್ಷೇತ್ರದಲ್ಲಿದ್ದರೂ ಸಚಿವರ ಬರಪರಿಶೀಲನೆಯಲ್ಲಿಪಾಲ್ಗೊಳ್ಳದೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದರು. ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್. ಎಸಿ ರಾಜೇಶ್, ತಹಸೀಲ್ದಾರ್ ನರಸಪ್ಪ, ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ, ಸಿಪಿಐ ಬಾಳನಗೌಡ ಎಂ.ಎಸ್. ಪಿಎಸ್ಐ ಸುಪ್ರಿತ್, ಮುಖಂಡರಾದ ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಕೆ. ಮಲ್ಲಿಕಾರ್ಜುನ ಮತ್ತು ರೈತ ಗೋವಿಂದಪ್ಪ, ದೇವೇಂದ್ರ, ಹನುಮಂತಪ್ಪ, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ