ನಾರಾಯಣ ಹೆಗಡೆ
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನ ಭರ್ತಿ ವಿಚಾರದ ಚರ್ಚೆ ಗರಿಗೆದರಿರುವ ಬೆನ್ನಲ್ಲೇ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರು ಮತ್ತೊಮ್ಮೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಪಟ್ಟು ಹಿಡಿದಿರುವುದು ಶಿವಣ್ಣನವರ ಅವರ ಮಂತ್ರಿಗಿರಿ ಕನಸು ಗರಿಗೆದರುವಂತೆ ಮಾಡಿದೆ.
ಸಚಿವ ಸ್ಥಾನದ ರೇಸ್‌ನಲ್ಲಿ ಹಲವು ಶಾಸಕರ ಹೆಸರುಗಳು ಕೇಳಿಬಂದಿದ್ದರೂ, ಶಿವಣ್ಣನವರ ವಿಚಾರದಲ್ಲಿ ಅವರ ಹಿರಿತನ ಮತ್ತು ಆಡಳಿತದ ಅನುಭವ ವಿಶೇಷವಾಗಿ ಚರ್ಚೆಗೆ ಬಂದಿದೆ. ಅಲ್ಲದೇ ಹಿಂದುಳಿದ ಕುರುಬ ಸಮಾಜದಿಂದ ಉತ್ತರ ಕರ್ನಾಟಕ ಭಾಗದಿಂದ ಆಡಳಿತ ಪಕ್ಷದಲ್ಲಿ ಗೆದ್ದಿರುವ ಹಿರಿಯ ಶಾಸಕರು ಇವರಾಗಿದ್ದಾರೆ.1994ರಲ್ಲಿ ಮೊದಲ ಬಾರಿಗೆ ಹಾವೇರಿ ಕ್ಷೇತ್ರದಿಂದ ಜನತಾದಳದ ಶಾಸಕರಾಗಿ ಆಯ್ಕೆಯಾದ ಅವರು, ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಹಲವು ರಾಜಕೀಯ ಏರಿಳಿತಗಳ ನಡುವೆಯೂ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಉಳಿಸಿಕೊಂಡಿದ್ದಾರೆ. ದೀರ್ಘ ರಾಜಕೀಯ ಅನುಭವ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಶಿವಣ್ಣನವರ ಪರ ಬಲವಾದ ಅಂಶಗಳಾಗಿವೆ.
ಆದರೆ ಸಚಿವ ಸ್ಥಾನ ನೀಡುವುದು ಕೇವಲ ವೈಯಕ್ತಿಕ ಅರ್ಹತೆ ಅಥವಾ ಹಿರಿತನದ ಆಧಾರದಲ್ಲಿ ನಡೆಯುವುದಿಲ್ಲ. ಪ್ರಾದೇಶಿಕ, ಸಾಮಾಜಿಕ ಹಾಗೂ ರಾಜಕೀಯ ಸಮೀಕರಣವೂ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣನವರ ವಿಚಾರದಲ್ಲಿಯೂ ಅಂತಿಮ ನಿರ್ಧಾರ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ.
ಮೂರು ದಶಕಗಳಿಗೂ ಅಧಿಕ ಕಾಲದ ರಾಜಕೀಯ ಅನುಭವ ಹೊಂದಿರುವ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಿದರೆ, ಅದು ಹಿರಿಯ ಶಾಸಕರಿಗೆ ನೀಡುವ ಗೌರವವಾಗಲಿದೆ ಎಂಬ ಅಭಿಪ್ರಾಯ ಅವರ ಬೆಂಬಲಿಗರಲ್ಲಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಲು ಸಚಿವ ಸ್ಥಾನ ನೆರವಾಗಲಿದೆ ಎಂಬ ನಿರೀಕ್ಷೆಯೂ ಇದೆ. ಅಲ್ಲದೇ ಪಕ್ಷಾತೀತವಾಗಿ ಶಿವಣ್ಣನವರಗೆ ಸಚಿವ ಸ್ಥಾನ ಸಿಗಬೇಕು ಎಂಬುವವರ ಸಂಖ್ಯೆ ಹೆಚ್ಚಿದೆ. ಆದರೆ ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೇ ಹಲವು ಶಾಸಕರು ಪೈಪೋಟಿ ನಡೆಸುತ್ತಿರುವುದರಿಂದ ಇರುವ ಒಂದು ಖಾಲಿ ಸ್ಥಾನ ಸಿಗುವುದು ಅಷ್ಟು ಸುಲಭವೂ ಇಲ್ಲ ಎನ್ನಲಾಗುತ್ತಿದೆ. ಕೊನೆಯ ಹಂತದಲ್ಲಿ ಯಾರಿಗೆ ಅವಕಾಶ, ಯಾರಿಗೆ ನಿರಾಸೆ ಎಂಬುದು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವನ್ನೇ ಅವಲಂಬಿಸಲಿದೆ.