ಮಂಡ್ಯ ಜಿಲ್ಲೆಯ ಏಳು ತಾಲೂಕನ್ನು ಬರಪೀಡಿತವೆಂದು ಘೋಷಿಸಿ: ಅಶೋಕ್‌ಕುಮಾರ್

KannadaprabhaNewsNetwork |  
Published : Sep 02, 2026, 02:30 AM IST
೧ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಹೆಚ್.ಆರ್.ಅಶೋಕ್‌ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.೨೫ಕ್ಕಿಂತ ಕಡಿಮೆ ಇದ್ದು, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದೆ ರೈತರು ಬಿತ್ತನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಮದ್ದೂರು, ಪಾಂಡವಪುರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಸರ್ಕಾರ ಅನ್ಯಾಯ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಏಳು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆಗಳಿಗೆ ನಾಲ್ಕು ಕಟ್ಟು ನೀರು ನೀಡುವುದನ್ನು ಕೈಬಿಟ್ಟು ನಿರಂತರವಾಗಿ ಒದಗಿಸುವ ಜೊತೆಗೆ ಬೆಳೆ ಪರಿಹಾರವಾಗಿ ಎಕರೆಗೆ ೫೦ ಸಾವಿರ ರು. ಮತ್ತು ಕಬ್ಬು ಬೆಳೆಗೆ ಎಕರೆಗೆ ೧.೫೦ ಲಕ್ಷ ರು. ನೀಡುವಂತೆ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.೨೫ಕ್ಕಿಂತ ಕಡಿಮೆ ಇದ್ದು, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದೆ ರೈತರು ಬಿತ್ತನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಮದ್ದೂರು, ಪಾಂಡವಪುರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಸರ್ಕಾರ ಅನ್ಯಾಯ ಮಾಡಿದೆ. ಕೂಡಲೇ ಇವೆರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.

ಬರಪರಿಹಾರವಾಗಿ ಪ್ರತಿ ಎಕರೆಗೆ ೫೦ ಸಾವಿರ ರು.ನಿಂದ ೭೫ ಸಾವಿರ ರು. ಹಾಗೂ ಕಬ್ಬು ಬೆಳೆಯಲು ಎಕರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿರುವುದರಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಎಕರೆಗೆ ಒಂದೂವರೆ ಲಕ್ಷ ರು. ಪರಿಹಾರ ನೀಡಬೇಕು. ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ೧೧೦ ಅಡಿಗಿಂತಲೂ ಹೆಚ್ಚು ನೀರು ಸಂಗ್ರಹವಾಗಿರುವುದರಿಂದ ರೈತರಿಗೆ ಬೆಳೆ ಬೆಳೆಯಲು ಕಟ್ಟು ಪದ್ಧತಿಯಲ್ಲಿ ನೀರನ್ನು ಹರಿಸದೆ ನಿರಂತರವಾಗಿ ಬೆಳೆಗಳಿಗೆ ನೀರು ಹರಿಸಬೇಕು. ನಾಲೆಗಳಿಗೆ ಹರಿಸಿದ ನೀರು ಮಳವಳ್ಳಿ ಮತ್ತು ಮದ್ದೂರು ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ಮಳವಳ್ಳಿ ಕೊನೆಯ ಭಾಗಕ್ಕೆ ಹೆಬ್ಬಳ್ಳ ಚೆನ್ನಯ್ಯ ನಾಲೆ ಮುಖಾಂತರ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್ ನೀರನ್ನು ಕೇವಲ ತಮಿಳುನಾಡಿಗೆ ನೀರು ಹರಿಸುವುದಕ್ಕಷ್ಟೇ ಇಟ್ಟುಕೊಂಡಂತಿದೆ. ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನಮ್ಮ ಅಣೆಕಟ್ಟೆ ನೀರು ಮೊದಲು ಮಂಡ್ಯ ಜಿಲ್ಲೆಗೆ ಆದ್ಯತೆಯಾಗಬೇಕು. ಬೆಳೆ ಬೆಳೆಯಲು ನೀರಿಲ್ಲವೆಂದಾದರೆ ಬೆಂಗಳೂರಿಗೂ ಕುಡಿಯುವ ನೀರು ಪೂರೈಸಬಾರದು. ಈ ಸಂಬಂಧ ತೊರೆಕಾಡನಹಳ್ಳಿ ನೀರು ಪೂರೈಕೆ ಘಟಕಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಆರನೇ ಹಂತದ ಕುಡಿಯುವ ನೀರಿನ ಯೋಜನೆ ಮಂಡ್ಯ ಜಿಲ್ಲೆಯ ಪಾಲಿಗೆ ಮರಣ ಶಾಸನವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಆರಂಭವಾಗಬಾರದು. ಅದಕ್ಕ ನಮ್ಮ ಸಂಪೂರ್ಣ ವಿರೋಧವಿದೆ. ಬೆಂಗಳೂರು ಜನರ ಕುಡಿಯುವ ನೀರಿಗೆ ಪರ್ಯಾಯ ಜಲಮೂಲಗಳನ್ನು ಹುಡುಕಿಕೊಳ್ಳಲಿ. ಐದನೇ ಹಂತದವರೆಗೆ ಕೆಆರ್‌ಎಸ್‌ನ್ನು ಅವಲಂಬಿಸಿದ್ದಾಗಿದೆ. ಇನ್ನು ನೀರು ಕೊಡುವುದಕ್ಕೆ ಸಾಧ್ಯವಿಲ್ಲ. ಈಗಲೂ ನೀರು ಕೊಟ್ಟರೆ ಕೃಷಿಗೆ ನೀರಿಲ್ಲದಂತಾಗುತ್ತದೆ ಎಂದರು.

ಮೇಕೆದಾಟು ಅಣೆಕಟ್ಟೆಗೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದು ಕೇಂದ್ರಸರ್ಕಾರ ಸ್ಪಷ್ಟಪಡಿಸಿದೆ. ಇನ್ನು ರಾಜ್ಯಸರ್ಕಾರ ತಡಮಾಡದೆ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಬೇಕು. ತಮಿಳುನಾಡು ಕೇಳಿದಾಗ ನೀರು ಹರಿಸಬೇಕಾದರೆ ಮೇಕೆದಾಟು ಅಣೆಕಟ್ಟು ಸೇರಿದಮತೆ ಹಲವು ಯೋಜನೆಗಳನ್ನು ನಾವು ಕೈಗೆತ್ತಿಕೊಳ್ಳಬೇಕಾಗುತ್ತದೆ. ಈ ವಿಚಾರವನ್ನು ತಮಿಳುನಾಡಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿಯನ್ನು ಅತಿ ಜರೂರಾಗಿ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರಸನ್ನ, ಅನಿಲ್‌ಕುಮಾರ್, ಎಂ.ಕೆ.ಕೃಷ್ಣ, ವೈರಮುಡಿ, ಸುನೀಲ್, ಸಿ.ಎಂ.ಜವರೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆ ೪ ತಿಂಗಳಿಂದ ವೇತನವಿಲ್ಲ
ತಮಿಳು ಕಾಲೋನಿ ೨೦೦ಕ್ಕೂ ಹೆಚ್ಚು ಶೆಡ್‌ಗಳಿಗೆ ಅಕ್ರಮ ವಿದ್ಯುತ್