ಮಿಮ್ಸ್ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯಲ್ಲಿನ ೨೦೦ಕ್ಕೂ ಹೆಚ್ಚು ಮನೆಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಂಡಿದ್ದು, ೮೫ ಶೆಡ್/ಮನೆಗಳಿಗೆ ಮಾತ್ರ ನಿಗಮ ಅಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ದಾಖಲೆ ಬಿಡುಗಡೆಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯಲ್ಲಿನ ೨೦೦ಕ್ಕೂ ಹೆಚ್ಚು ಮನೆಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಂಡಿದ್ದು, ೮೫ ಶೆಡ್/ಮನೆಗಳಿಗೆ ಮಾತ್ರ ನಿಗಮ ಅಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ದಾಖಲೆ ಬಿಡುಗಡೆಗೊಳಿಸಿದ್ದಾರೆ.

ಗುತ್ತಲು ಶಾಖಾ ವ್ಯಾಪ್ತಿಗೆ ಸೇರುತ ತಮಿಳು ಕಾಲೋನಿಯಲ್ಲಿ ೮೫ ಶೆಡ್/ಮನೆಗಳಿಗೆ ಮಾತ್ರ ಅಧಿಕೃತವಾಗಿ ನಿಗಮದ ನಿಯಮಾನುಸಾರ ವಿದ್ಯುತ್ ಸಂಪರ್ಕ ಹಾಗೂ ಆರ್‌ಆರ್.ಸಂಖ್ಯೆಗಳನ್ನು ಪಡೆದಿದ್ದಾರೆ. ಉಳಿದ ಸುಮಾರು ೨೦೦ಕ್ಕೂ ಹೆಚ್ಚು ಶೆಡ್‌ಗಳಿಗೆ ನಿಗಮದಿಂದ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲವೆಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿರುವುದಾಗಿ ಹೇಳಿದ್ದಾರೆ.

ಶೆಡ್‌ನಲ್ಲಿ ವಾಸವಾಗಿರುವವರು ಅನಧಿಕೃತವಾಗಿ ಎಲ್‌ಟಿ ಲೈನ್‌ಗೆ ಕೊಕ್ಕೆ ಹಾಕಿಕೊಂಡು ವಿದ್ಯುತ್ ಸಂಪರ್ಕ ಪಡೆದಿರುವುದಾಗಿ ಕಂಡುಬಂದಿದ್ದು, ಇದರ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೆಸ್ಕ್ ಜಾಗೃತದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆದಿರುವುದನ್ನು ಬಹಿರಂಗಪಡಿಸಿದ್ದಾರೆ.

೨೦೦೯ ರಿಂದಲೂ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರು. ಆರ್ಥಿಕ ನಷ್ಟ ಉಂಟು ಮಾಡಿದ್ದು ಕಳ್ಳತನದಿಂದ ವಿದ್ಯುತ್ ಸಂಪರ್ಕ ಪಡೆದಿರುವ ತಮಿಳು ನಿವಾಸಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನಿನ ಪ್ರಕಾರ ದಂಡ ವಿಧಿಸುವಂತೆ ಆಗ್ರಹಿಸಿದ್ದಾರೆ.

ಒತ್ತುವರಿ ತೆರವಿಗೆ ಮೀನಮೇಷ:

ಮಿಮ್ಸ್ ಆಸ್ಪತ್ರೆಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಕಾನೂನುಬಾಹೀರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅಕ್ರಮವಾಗಿ ಜಮೀನುಗಳನ್ನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಹಾಗೂ ನಗರಸಭೆಯಿಂದ ಅಕ್ರಮ ಖಾತೆಗಳನ್ನು ನಡೆಸಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

೩೬ ಕೋಟಿ ರು. ವೆಚ್ಚ ವ್ಯರ್ಥ:

ಆಸ್ಪತೆ ಜಾಗದ ತಮಿಳು ಕಾಲೋನಿ ನಿವಾಸಿಗಳಿಗೆ ಒಂದು ವರ್ಷದೊಳಗೆ ಪುನರ್ವಸತಿ ಕಲ್ಪಿಸಿ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿ ದಶಕ ಕಳೆದರೂ ನ್ಯಾಯಾಲಯದ ಆದೇಶ ಪಾಲನೆಯಾಗಿಲ್ಲ. ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ೩೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ೫೭೬ ಮನೆಗಳು ಪಾಳುಬಿದ್ದಿವೆ. ಇದರಿಂದ ಸರ್ಕಾರಕ್ಕೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿದೆ. ತಮಿಳು ಕಾಲೋನಿಯ ನಿವಾಸಿಗಳು ಜಾಗದಿಂದ ತೆರವುಗೊಳಿಸದಂತೆ ತಡೆಯಾಜ್ಞೆ ತಂದಿರುವುದಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆಯಾಗಿದೆ ಎಂದು ದೂರಿದ್ದಾರೆ.ನೆನಗುದಿಗೆ ಬಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಮಿಮ್ಸ್ ಆಸ್ಪತ್ರೆ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ೩೧೧ ಕೋಟಿ ರು., ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ೧೬೧ ಕೋಟಿ ರು.ಗೆ ಸಂಬಂಧಿಸಿದಂತೆ ಮಿಮ್ಸ್ ನಿರ್ದೇಶಕರು ಸರ್ಕಾರಕ್ಕೆ ರೇಖಾ ಅಂದಾಜುಪಟ್ಟಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಹತ್ತು ಎಕರೆ ಜಾಗದ ಅವಶ್ಯಕತೆ ಇದೆ. ಆಸ್ಪತ್ರೆಯ ಒತ್ತುವರಿ ಜಾಗವನ್ನು ತೆರವುಗೊಳಿಸಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ಗೆ ಒಂದೇ ಸೂರಿನಡಿ ಜಾಗ ಲಭ್ಯವಾಗಲಿದೆ ಎಂದು ಕೆ.ಆರ್.ರವೀಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ರಸ್ತೆ ಅಪಘಾತ ಮತ್ತು ಇತರೆ ಮಾರಣಾಂತಿಕ ಖಾಯಿಲೆಗಳಿಂದ ಬಳಲುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಒತ್ತುವರಿ ಜಾಗವನ್ನು ತೆರವುಗೊಳಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಆಸಕ್ತಿ ತೋರಿಸದಿರುವುದೇ ಅಮಾಯಕರ ಸಾವಿಗೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.

ಸೆ.೭ರಿಂದ ಡೀಸಿ ಕಚೇರಿ ಎದುರು ಆಮರಣಾಂತ ಉಪವಾಸ

ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಹಾಗೂ ತಮಿಳು ಕಾಲೋನಿ ಜಾಗವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸೆ.೭ ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ನಡೆಸುವುದಾಗಿ ಕೆ.ಆರ್.ರವೀಂದ್ರ ಹೇಳಿದರು.

ಮಿಮ್ಸ್ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಭೂಸ್ವಾಧೀನವಾದಂತೆ ಖರಾಬು ಜಮೀನು ಸೇರಿ ಒಟ್ಟು ೭೮ ಎಕರೆ ೧೫ ಗುಂಟೆ ಜಮೀನಿನ ಒತ್ತುವರಿ ತೆರವುಗೊಳಿಸಬೇಕು. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಾಡಲು ಅನುಭವಿ ವಕೀಲರನ್ನು ನೇಮಿಸುವುದು. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಜೊತೆ ತಕ್ಷಣವೇ ಸಭೆ ನಡೆಸಿ ತಮಿಳು ನಿವಾಸಿಗಳು ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ ತೆರವಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸುವಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳನ್ನು ಅನಾಮತುಗೊಳಿಸುವಂತೆ ಆಗ್ರಹಿಸಿದರು.