ಜಿಲ್ಲಾ ವಿಷ್ಣುಸೇನಾ ಸಮಿತಿ ಕಚೇರಿಯಲ್ಲಿ ನಡೆದ ಸಭೆ
ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಡಾ. ವಿಷ್ಣು ಪುಣ್ಯಭೂಮಿ ಎಂದು ಘೋಷಿಸುವಂತೆ ಜಿಲ್ಲಾ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ಮೂರ್ತಿ ಎಸ್. ಸಿಂಹ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ವಿಷ್ಣುಸೇನಾ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಸಿನಿಮಾ ರಂಗದ ಮೇರು ನಟರಾಗಿದ್ದ ಡಾ. ವಿಷ್ಣು ಕನ್ನಡ ಚಿತ್ರರಂಗದ ಅಗ್ರಗಣ್ಯ ನಾಯಕ ನಟರಾಗಿ ಅತ್ಯಂತ ಗುಣಾತ್ಮಕ ಸದಭಿರುಚಿಯ ಚಿತ್ರಗಳನ್ನು ನೀಡಿ, ಕರ್ನಾಟಕದ ನಾಡು-ನುಡಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟಕ್ಕೆ ಭಾಗವಹಿಸುತ್ತಿದ್ದರು ಎಂದರು.ಬಡವರ ಕಣ್ಣೊರೆಸಲು ತಮ್ಮ ಮಿತಿಯನ್ನು ಮೀರಿ ಸಹಾಯ ಹಸ್ತ ಚಾಚುತ್ತಿದ್ದರು. ಅನೇಕ ಆಶ್ರಮಗಳಿಗೆ, ಮಂದಿರ ಮಠಗಳಿಗೆ, ಆರೋಗ್ಯ ಸೇವೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡಿದ್ದು, ದಾನ ಧರ್ಮಗಳಲ್ಲಿ ಹಾಗೂ ಸ್ನೇಹ ಸಂಬಂಧಗಳಲ್ಲಿ ಕರ್ನಾಟಕದ ಕಲಿಯುಗ ಕರ್ಣನಾಗಿ, ಅನೇಕ ರೀತಿಯ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಈ ಮಹಾನ್ ವ್ಯಕ್ತಿಗೆ ಈ ನಮ್ಮ ರಾಜ್ಯ ಸರ್ಕಾರಗಳು ನಡೆದುಕೊಂಡ ರೀತಿ ನಿಜಕ್ಕೂ ತಲೆತಗ್ಗಿಸುವಂಥದ್ದು, ಒಬ್ಬ ಕಲಾ ಪ್ರೇಮಿಯಾಗಿ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಸ್ವಾಭಿಮಾನಿ ಕನ್ನಡಿಗನಾಗಿ ಸರ್ಕಾರಗಳ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ತಕ್ಷಣ ಮುಖ್ಯಮಂತ್ರಿಗಳು ಸರ್ಕಾರದ ಈ ಭೂಮಿಯನ್ನು ವಶಕ್ಕೆ ಪಡೆದು ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುಲು ಆದೇಶಿಸಿ, ಆ ಸ್ಥಳವನ್ನು ಡಾ. ವಿಷ್ಣು ಪುಣ್ಯಭೂಮಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಬೋರ್ಡಿನ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಜಿಲ್ಲಾ ಡಾ.ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳಾದ ಟಿ.ಕೆ ಯೋಗೇಶ್, ರಮೇಶ್ ನಾಯಕ್, ಹೃದಯ ಚಂದನ್, ದಿವಾಕರ್, ಟಿ.ಡಿ. ಅನಿಲ್‌ಕುಮಾರ್, ಇಮ್ರಾನ್ ಅಹಮದ್, ರವಿಕುಮಾರ್, ಕಿರಣ್, ದಿನೇಶ್, ಅಶ್ವಿನಿ ಮತ್ತಿತರರು ಭಾಗವಹಿಸಿದ್ದರು.