ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ತಹಸೀಲ್ದಾರ್ ಎಂ. ರೇಣುಕಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರು: ಜಿಲ್ಲೆಯನ್ನು ಬರಗಾಲ ಪೀಡಿತ ಘೋಷಣೆ ಮಾಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ತುಂಬುವ ಗೊಂದಲ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ಶುಕ್ರವಾರ ತಹಸೀಲ್ದಾರ್ ಎಂ. ರೇಣುಕಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳೇರ್ ಮಾತನಾಡಿ, ಹಾವೇರಿ ಜಿಲ್ಲೆಯ ರೈತರು ಅನಾವೃಷ್ಟಿಯಿಂದ ಸರಾಸರಿ ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಿಸುತ್ತಿದ್ದಾರೆ. ಸಾಲ ಶೂಲ ಮಾಡಿ ಎರಡೆರಡು ಬಾರಿ ಬಿತ್ತನೆ ಮಾಡಿ ಬಿತ್ತಿದ ಬೆಳೆ ಮಳೆ ಬಾರದೆ ಬತ್ತಿಹೋಗಿದೆ. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಯಂತಹ ದಾರಿಹಿಡಿದಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಅನಾವೃಷ್ಟಿಯಿಂದ ಬರಗಾಲ ಇರುವುದರಿಂದ ರೈತರು ಮಾಡಿದ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ರೈತರ ಜೀವ ರಕ್ಷಿಸಬೇಕು. ಸರ್ಕಾರದಿಂದ ಯಾವುದೇ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿಲ್ಲ ಎಂಬ ಸ್ವಯಂ ಘೋಷಣೆ ಪತ್ರ ಕೊಡಬೇಕೆಂಬ ನಿಯಮ ಅವೈಜ್ಞಾನಿಕವಿದ್ದು, ನಿಗದಿತ ಅವಧಿಯಲ್ಲಿ ರೈತರಿಗೆ ಬೆಳೆವಿಮೆ ತುಂಬಲು ಸಾಧ್ಯವಾಗುತ್ತಿಲ್ಲ. ಕಾರಣ ಸ್ವಯಂ ಘೋಷಣೆ ಪತ್ರವನ್ನು ರದ್ದುಪಡಿಸಿ ಮೊದಲಿನಂತೆ ಬೆಳೆವಿಮೆ ತುಂಬುವಂತಾಗಬೇಕು. ಸಹಕಾರಿ ಸಂಘಗಳಲ್ಲಿ ಬೆಳೆಸಾಲ ಪಡೆದ ರೈತನಿಗೆ ತಾನು ಪಡೆದ ಸಾಲಕ್ಕೆ ವಿಮಾ ಕಂತನ್ನು ತುಂಬಲು ಅವಕಾಶವಿರುತ್ತದೆ. ಆದರೆ, ತನ್ನ ಜಮೀನಿನ ಉತಾರಕ್ಕೆ ಅನುಗುಣವಾಗಿ ಮಾಡಿದ ಬೆಳೆಗೆ ಬೆಳೆವಿಮೆ ತುಂಬಲು ಅವಕಾಶ ಇರುವುದಿಲ್ಲ. ಆದ್ದರಿಂದ ರೈತನಿಗೆ ತಾನು ಬೆಳೆದ ಬೆಳೆಗೆ ಜಮೀನಿನ ಕ್ಷೇತ್ರಕ್ಕೆ ಅನುಗುಣವಾಗಿ ಬೆಳೆವಿಮೆ ತುಂಬಲು ಕೆಸಿಸಿ ಬ್ಯಾಂಕಿಗೆ ನಿರ್ದೇಶನ ನೀಡಬೇಕು. ಈ ಮೇಲಿನ ಬೇಡಿಕೆಗಳನ್ನು ಜುಲೈ 21ರೊಳಗಾಗಿ ಈಡೇರಿಸದಿದ್ದಲ್ಲಿ ಹಾವೇರಿ ಮೈಲಾರ ಮಹದೇವ ಸರ್ಕಲ್ ನಲ್ಲಿ ಜಿಲ್ಲೆಯ ಸಾವಿರಾರು ರೈತರೊಂದಿಗೆ ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕು ಅಧ್ಯಕ್ಷ ಪ್ರಭುಗೌಡ ಬ. ಪ್ಯಾಟಿ, ಕಾರ್ಯದರ್ಶಿ ಗಂಗನಗೌಡ ಮುದಿಗೌಡ್ರ, ಉಪಾಧ್ಯಕ್ಷ ಶಂಕ್ರಪ್ಪ ಮಕ್ಕಳ್ಳಿ, ಶಾಂತನಗೌಡ ಪಾಟೀಲ, ಯಶವಂತ ತಿಮಕಾರ, ಕರಬಸಪ್ಪ ಬಣಕಾರ, ಈರಪ್ಪ ಮಾಳೂರು ಹಾಗೂ ರೈತ ಮುಖಂಡರು ಇದ್ದರು,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.