-ತಾಲೂಕು ಆಡಳಿತದಿಂದ ಕಡೂರು ವಿಧಾನಸಭಾ ಕ್ಷೇತ್ರದ ಸೀಗೇಹಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಅನೇಕ ದಶಕಗಳ ಬಳಿಕ ಕ್ಷೇತ್ರದ ಸೀಗೇಹಡ್ಲು ಕಂದಾಯ ಗ್ರಾಮವಾಗಿ ಘೋಷಣೆ ಆಗುತ್ತಿರುವುದು ಹಾಗೂ ಹಕ್ಕು ಪತ್ರ ನೀಡಲು ಕಾಲ ಕೂಡಿ ಬಂದಿರುವುದು ಸಂತೋಷದ ವಿಷಯ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.
ತಾಲೂಕು ಆಡಳಿತದಿಂದ ಕಡೂರು ವಿಧಾನಸಭಾ ಕ್ಷೇತ್ರದ ಸೀಗೇಹಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮ ಎಂದು ಘೋಷಿಸಿ, ಮನೆಗಳ ಮಾಲೀಕರಿಗೆ ಹಕ್ಕು ಪತ್ರಗಳ ವಿತರಿಸಿ ಮಾತನಾಡಿದರು.ಮನೆಗಳ ಹಕ್ಕುಪತ್ರಗಳೇ ಅಲ್ಲದೆ ಜಮೀನು ತೋಟಗಳನ್ನುಸೀಗೇಹಡ್ಲು ಕಂದಾಯ ವ್ಯಾಪ್ತಿಗೆ ತರುವಂತೆ ತಹಸೀಲ್ದಾ ರರಿಗೆ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನುಗಳ ಪಹಣಿ ವಿತರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಸರ್ಕಾರದ ಕಂದಾಯ ಇಲಾಖೆಯಿಂದ 2023ರಲ್ಲಿ ಕ್ಷೇತ್ರದಲ್ಲಿ ಸರ್ವೆ ನಡೆಸಿ ಪರಿಹಾರ ಹುಡುಕುವ ಮೂಲಕ 131ಕಂದಾಯ ಗ್ರಾಮಗಳು ಮತ್ತು 31 ಕಂದಾಯ ಉಪ ಗ್ರಾಮಗಳನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 61 ಗ್ರಾಮಗಳು ಕಂದಾಯ ಗ್ರಾಮಗಳಾಗಿ ಬಂದಿದ್ದು 72 ಬಾಕಿ ಇದೆ. ಸ್ವಾತಂತ್ರ ಬಂದು 78 ವರ್ಷವಾದರೂ ಅನೇಕ ಸರ್ಕಾರಗಳು ಬಂದರೂ ಸಮಸ್ಯೆಗಳು ಬಗೆಹರಿದಿರಲಿಲ್ಲ ಎಂದರು.
ಕ್ಷೇತ್ರದಲ್ಲಿ14,700 ಹಕ್ಕು ಪತ್ರ ನೀಡದಿರುವ ಗ್ರಾಮಗಳನ್ನು ಗುರುತಿಸಿ ಸರ್ಕಾರದಿಂದ ಶೇ.60 ರಷ್ಟು ಪರಿಹಾರ ಕಂಡು ಕೊಳ್ಳುವ ಮುಖೇನ ಅಧಿಕಾರಿಗಳ ಶ್ರಮದಿಂದ ಕಡೂರಿನಲ್ಲಿ 3 ಸಾವಿರ ಹಕ್ಕು ಪತ್ರ ವಿತರಣೆ ಜೊತೆ ಇ-ಸ್ವತ್ತು ಮತ್ತು ನೋಂದಣಿ ಪತ್ರವನ್ನು ನಮ್ಮ ಸರ್ಕಾರದಿಂದ ವಿತರಿಸಲಾಗುತ್ತಿದೆ ಎಂದರು. ಒಬ್ಬ ರೈತನ ಮಗ ಶಾಸಕನಾಗಲು ಸೀಗೇಹಡ್ಲು ಅಂತಹ ಗ್ರಾಮಗಳ ಜನ ನೀಡಿರುವ ಮತಗಳು ಕಾರಣವಾಗಿವೆ. ತಾವು ಈಗಾಗಲೇ ಸೀಗೇಹಡ್ಲು ಗ್ರಾಮದ ಜನರಿಗೆ ಸಮುದಾಯ ಭವನ ನಿರ್ಮಾಣಕ್ಕೆ ₹15ಲಕ್ಷ ಅನುದಾನ ನೀಡಿದ್ದರೂ ಕೆಲಸ ಆರಂಭವಾಗಿಲ್ಲ. ತಳಪಾಯದ ಬಳಿಕ ₹70 ಲಕ್ಷ ಭವನಕ್ಕೆನೀಡಲಾಗುವುದು. ಗ್ರಾಮದ ಸಂಗೊಳ್ಳಿರಾಯಣ್ಣ ಪ್ರತಿಮೆ ಮಾಡಿಸಿಕೊಡುತ್ತೇನೆ. ಅಲ್ಲದೆ ಈ ಭಾರಿ ಕಾಮನಕೆರೆಗೆ ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದು ಇದರಿಂದ ಸುತ್ತಲಿನ ಅನೇಕ ಗ್ರಾಮಗಳಿಗೆ ಅನುಕೂಲವಾಗಿದೆ. ಶಾಶ್ವತ ನೀರಾವರಿ ಯೋಜನೆಗೆ ₹407 ಕೋಟಿ ಮಂಜೂರಾಗಿದೆ. ಜನವರಿ ಯೊಳಗೆ ಗಾರ್ಮೆಂಟ್ಸ್ ಆರಂಭವಾಗುವ ಮೂಲಕ 6 ಸಾವಿರ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದರು.ಇದೀಗ ಗ್ರಾಮದ 128 ಮನೆಗಳ ಹಕ್ಕುಪತ್ರ ನೀಡುತ್ತಿದ್ದೇವೆ. ಇದಕ್ಕಾಗಿ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳ ಶ್ರಮಕ್ಕೆ ಅಭಿನಂದಿಸುತ್ತೇನೆ ಎಂದರು.
ತಹಸೀಲ್ದಾರ್ ಸಿ.ಆರ್. ಪೂರ್ಣಿಮಾ ಮಾತನಾಡಿ, ದಾಖಲೆ ಇಲ್ಲದ ಗ್ರಾಮಗಳನ್ನು 2023 ರಲ್ಲಿ ಹುಡುಕಿ ಪಟ್ಟಿ ಮಾಡಿದ್ದು , ಮಾನದಂಡದಂತೆ 250 ಮನೆಗಳಿದ್ದರೆ ಮಾತ್ರ ಕಂದಾಯ ಗ್ರಾಮವಾಗಿ ಘೋಷಿಸಲಾಗುವುದು. ಈ ನಿಟ್ಟಿನಲ್ಲಿ ಸೀಗೇಹಡ್ಲು ಗ್ರಾಮದ 120 ಕುಟುಂಬಗಳಿಗೆ ಹಕ್ಕುಪತ್ರಗಳ ಜೊತೆ ನೋಂದಾಯಿತ ಇ- ಸ್ವತ್ತಿನೊಂದಿಗೆ ವಿತರಿಸಲಾಗುತ್ತಿದೆ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಡೂರು ತಾಲೂಕಿನ ಸೀಗೇಹಡ್ಲು ಗ್ರಾಮದಲ್ಲಿ ಹಕ್ಕುಪತ್ರ ವಿತರಣೆಗೆ ಆಯ್ಕೆ ಮಾಡಿರುವುದು ಸಂತಸದ ಸಂಗತಿ. ಕಂದಾಯ ಮಂತ್ರಿ ಕೃಷ್ಣಬೈರೇಗೌಡರು ಅನುಭವಿಗಳಾಗಿದ್ದು, ಅವರ ದಿಟ್ಟ ಮತ್ತು ಕ್ರಾಂತಿಕಾರಕ ನಿರ್ಧಾರದಿಂದ ಹಕ್ಕು ಪತ್ರಗಳ ವಿತರಣೆ ಆಗುತ್ತಿದೆ. ಕಡೂರಲ್ಲೂ ಪುರಸಭೆಯಿಂದ ಬಿ.ಖಾತಾ ಅಭಿಯಾನ ಮಾಡಿ ಹಕ್ಕುಪತ್ರ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಉಪನೋಂದಣಾಧಿಕಾರಿ ತುಳಸೀಲಕ್ಷ್ಮಿಕಾಮನಕೆರೆ ಗ್ರಾ ಪಂ ಅಧ್ಯಕ್ಷ ಶೇಖರ್, ಸೀಗೇಹಡ್ಲು ಹರೀಶ್, ತಾಪಂ ಇಒ ಸಿ.ಆರ್. ಪ್ರವೀಣ್, ಮಲಿಯಪ್ಪ, ಸದಸ್ಯೆ ಸೌಭಾಗ್ಯ ಶಿವಣ್ಣ, ಗೋವಿಂದಪ್ಪ, ಮಲ್ಲೇಶಪ್ಪ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದವರು ಇದ್ದರು.
2ಕೆೆಕೆೆಡಿಯು1.ಕಡೂರು ವಿಧಾನಸಭಾ ಕ್ಷೇತ್ರದ ಸೀಗೇಹಡ್ಲು ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸುವ ಮೂಲಕ ಹಕ್ಕುಪತ್ರ ಗಳನ್ನು ವಿತರಿಸಲಾಯಿತು.